
ಕೊಟ್ಟಿಗೆಹಾರ: ಸಮೀಪದ ಬಿನ್ನಡಿ ಗ್ರಾಮದ ಯುವಕ ಬಿ.ಎಸ್. ಸಜಿತ್ ಅವರು ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಸೇರ್ಪಡೆಯಾಗಿದ್ದು, ಗ್ರಾಮದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಸಂದೇಶ್ ಜಯಶೀಲ ಅವರ ಪುತ್ರರಾಗಿರುವ ಸಜಿತ್, ದೇಶದ ಸುರಕ್ಷತೆ ಮತ್ತು ರಾಷ್ಟ್ರಸೇವೆಯ ಮಹತ್ತರ ಉದ್ದೇಶದೊಂದಿಗೆ ಭಾರತೀಯ ಸೇನೆಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಸಜಿತ್ ಅವರ ಈ ಸಾಧನೆ ಯುವಜನತೆಗೆ ಮಾದರಿಯಾಗಿದ್ದು, ಗ್ರಾಮಸ್ಥರಲ್ಲಿ ಹೆಮ್ಮೆ ಮೂಡಿಸಿದೆ. ಅವರ ಸೇನೆ ಸೇರ್ಪಡೆ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಬಂಧು-ಬಳಗ ಹಾಗೂ ಹಿರಿಯರು ಸೇರಿ ಸನ್ಮಾನ ಕಾರ್ಯಕ್ರಮ ಆಯೋಜಿಸಿ ಶುಭ ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕೃಷ್ಣಪ್ಪ, ಮಲ್ಲೇಶ್, ಪ್ರದೀಪ್ ಗೌಡ, ಪ್ರಭಾಕರ್ ಬಿನ್ನಡಿ, ಸುರೇಶ್, ರಮೇಶ್, ಗಿರೀಶ್, ಮಂಜುನಾಥ್, ಸಂದೇಶ್, ಶರತ್ ಬಿನ್ನಡಿ, ಪ್ರದೀಪ್, ಪ್ರದೀಪ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಜಿತ್ ಅವರ ಸಾಧನೆಯನ್ನು ಶ್ಲಾಘಿಸಿದರು. ದೇಶದ ಗಡಿಯಲ್ಲಿ ಸೇವೆ ಸಲ್ಲಿಸಲು ಗ್ರಾಮೀಣ ಯುವಕನೊಬ್ಬ ಮುಂದಾಗಿರುವುದು ಗ್ರಾಮದ ಗೌರವವನ್ನು ಹೆಚ್ಚಿಸಿದ್ದು, ರಾಷ್ಟ್ರಸೇವೆಯ ಮಾರ್ಗದಲ್ಲಿ ಯಶಸ್ಸು ದೊರೆಯಲಿ ಎಂದು ಎಲ್ಲರೂ ಶುಭ ಹಾರೈಸಿದರು. ಗ್ರಾಮದಿಂದ ಇನ್ನಷ್ಟು ಯುವಕರು ದೇಶಸೇವೆಗೆ ಪ್ರೇರೇಪಿತರಾಗಲಿ ಎಂಬ ಆಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.




