
ಮೂಡಿಗೆರೆ: ಅಧಿಕಾರ ಎಂಬ ಸಕ್ಕರೆಗೆ ಇರುವೆಗಳು ಮುತ್ತುವುದು ಸಹಜವಾಗಿದ್ದು, ವಿಧಾನ ಪರಿಷತ್ ಚುನಾವಣೆಯ ಗೆಲುವಿಗೆ ಕಾಂಗ್ರೆಸ್ ಅತಿಯಾಗಿ ಹೆಮ್ಮೆಪಡುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಕೆಲ ಶಾಸಕರಿಂದ ಅಡ್ಡಮತದಾನ ಮಾಡಿಸಿಕೊಂಡಿರಬಹುದು. ಆದರೆ ಅಧಿಕಾರದಲ್ಲಿರುವ ಪಕ್ಷವು ಇದಕ್ಕಾಗಿ ಬೀಗುವ ಅಗತ್ಯವಿಲ್ಲ. ಅಧಿಕಾರವೆಂಬುದು ಸಕ್ಕರೆಯಿದ್ದಂತೆ, ಅದರ ಸುತ್ತ ಇರುವೆಗಳು ಸೇರುವುದು ಸಹಜ. ಆದರೆ ಒಂದು ದಿನ ಆ ಸಕ್ಕರೆ ಖಾಲಿಯಾಗಲೇಬೇಕು. ಆಗ ನಿಮ್ಮ ಸುತ್ತ ಯಾರೂ ಇರುವುದಿಲ್ಲ ಎಂದು ಟೀಕಿಸಿದ್ದಾರೆ. ಈ ಹಿಂದೆ ‘ಆಪರೇಷನ್ ಕಮಲ’ ಎಂಬ ಹೆಸರಿನಲ್ಲಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿತ್ತು. ಹಣ, ತೋಳ್ಬಲ ಹಾಗೂ ಅಧಿಕಾರದ ಪ್ರಭಾವ ಬಳಸಿ ವಿರೋಧ ಪಕ್ಷದ ಸದಸ್ಯರನ್ನು ಸೆಳೆಯುವುದು ಕಾಂಗ್ರೆಸ್ನ ಹಳೆಯ ಚಾಳಿಯಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕ್ಷೇತ್ರಗಳ ಜನಪ್ರತಿನಿಧಿಗಳಿಗೆ ಸಮರ್ಪಕ ಅನುದಾನ ನೀಡಲು ಸರ್ಕಾರ ವಿಫಲವಾಗಿದೆ. ಕೆಲ ಆಯ್ದ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ವಿರೋಧ ಪಕ್ಷದ ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕಳವಳಕಾರಿಯಾಗಿದ್ದು, ರಸ್ತೆಗಳು ಹದಗೆಟ್ಟಿವೆ, ಬರಗಾಲ ತಾಂಡವವಾಡುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಸರ್ಕಾರಿ ಕಚೇರಿಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅಧಿಕಾರದ ಮದ ಇನ್ನೂ ಹೆಚ್ಚು ದಿನ ಉಳಿಯುವುದಿಲ್ಲ. ಸರ್ಕಾರದ ಅವಧಿಗೆ ಕೇವಲ ಎರಡು ವರ್ಷಗಳು ಮಾತ್ರ ಬಾಕಿ ಇದ್ದು, ಪರಿಷತ್ ಚುನಾವಣೆ ಸಾರ್ವಜನಿಕ ಚುನಾವಣೆ ಅಲ್ಲ ಎಂಬುದನ್ನು ಕಾಂಗ್ರೆಸ್ ಅರಿತುಕೊಳ್ಳಬೇಕು. ಅಧಿಕಾರದಿಂದ ಕೆಳಗಿಳಿಯುವ ಮುನ್ನ ಜನರು ನೆನಪಿಡುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಲಿ. ರಾಜ್ಯದ ಮತದಾರರು ಈಗಾಗಲೇ ಕಾಂಗ್ರೆಸ್ನ್ನು ಮನೆಗೆ ಕಳುಹಿಸಲು ಕಾಯುತ್ತಿದ್ದಾರೆ ಎಂದು ಪ್ರಾಣೇಶ್ ಹೇಳಿದ್ದಾರೆ.



