
ಬೆಂಗಳೂರು: ನೈಋತ್ಯ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ವಾರಾಂತ್ಯದಂದು ತಂಪಾದ ವಾತಾವರಣ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ 29 ರಿಂದ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ರಿಂದ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಹಗಲಿನಲ್ಲಿ ಶೇ.40 ಹಾಗೂ ಸಂಜೆ ಮತ್ತು ರಾತ್ರಿ ವೇಳೆ ಶೇ.65ರಷ್ಟು ಮಳೆಯ ಸಾಧ್ಯತೆ ಇದ್ದು, ಪಶ್ಚಿಮ ದಿಕ್ಕಿನಿಂದ ಗಂಟೆಗೆ 15 ರಿಂದ 25 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಕೆಲವೆಡೆ ಗಾಳಿಯ ವೇಗ 40 ಕಿ.ಮೀ ತಲುಪುವ ಸಾಧ್ಯತೆಯೂ ಇದೆ. ನಗರದ ಎಂ.ಜಿ. ರಸ್ತೆ, ವೈಟ್ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಜಯನಗರ ಹಾಗೂ ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಜೆ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಜೂನ್ 21ರಿಂದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲೂ ಮಳೆಯ ಸಾಧ್ಯತೆ ಇದ್ದರೆ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆ ಮತ್ತು ಗಂಟೆಗೆ 40ರಿಂದ 50 ಕಿ.ಮೀ ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಒಣ ಹವಾಮಾನದ ನಡುವೆ ಕೆಲವೆಡೆ ತುಂತುರು ಮಳೆಯಾಗುವ ನಿರೀಕ್ಷೆಯಿದ್ದು, ಸೆಖೆಯ ವಾತಾವರಣ ಮುಂದುವರಿಯಲಿದೆ.




