
ಚಿತ್ರದುರ್ಗ: ರಾಜ್ಯದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಹೃದಯವಿದ್ರಾವಕ ಘಟನೆಗಳಲ್ಲಿ ಇಬ್ಬರು ನಾಲ್ಕು ವರ್ಷದ ಕಂದಮ್ಮಗಳು ಸಾವನ್ನಪ್ಪಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ವೈಷ್ಣವ್ ಎಂಬ ನಾಲ್ಕು ವರ್ಷದ ಬಾಲಕ ಎದೆ ಉರಿ ಕಾಣಿಸುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದು, ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಎಂದು ಭಾವಿಸಿದ ಪೋಷಕರು ಮನೆಮದ್ದು ನೀಡಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಮಗುವಿನ ಆರೋಗ್ಯ ಗಂಭೀರವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ವೈಷ್ಣವ್ ಕೊನೆಯುಸಿರೆಳೆದಿದ್ದಾನೆ. ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲಿಗೌಡನಹಳ್ಳಿಯಲ್ಲಿ ಅದ್ವಿತಾ ಎಂಬ ನಾಲ್ಕು ವರ್ಷದ ಬಾಲಕಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾಳೆ. ಮನೆಯಲ್ಲಿ ಆಟವಾಡುತ್ತಿದ್ದ ಬಾಲಕಿ ನೀರು ಕುಡಿಯಲು ಅಡುಗೆ ಮನೆಗೆ ತೆರಳಿದ್ದ ವೇಳೆ ಆನ್ ಆಗಿದ್ದ ಗ್ರೈಂಡರ್ ಅನ್ನು ಮುಟ್ಟಿದ್ದು, ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಬಾಲಕಿ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಎರಡು ಕುಟುಂಬಗಳಲ್ಲೂ ಕಣ್ಣೀರು ಮಡುಗಟ್ಟಿದ್ದು, ಮಕ್ಕಳನ್ನು ಎಷ್ಟೇ ಎಚ್ಚರಿಕೆಯಿಂದ ನೋಡಿಕೊಂಡರೂ ಕೆಲವೊಮ್ಮೆ ಇಂತಹ ದುರಂತಗಳು ಸಂಭವಿಸುತ್ತಿರುವುದು ನೋವುಂಟು ಮಾಡಿದೆ.




