
ಬೆಂಗಳೂರು: ರಾಜ್ಯದಲ್ಲಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ ಚರ್ಚೆ ನಡುವೆಯೇ ಪಿಂಚಣಿದಾರರಿಗೆ ದೊಡ್ಡ ಆಘಾತ ಎದುರಾಗಿದೆ. ಕಳೆದ ಮೂರು ತಿಂಗಳಿಂದ ಸುಮಾರು 16 ಲಕ್ಷ ಜನರಿಗೆ ಪಿಂಚಣಿ ಹಣ ತಲುಪಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಹಾಗೂ ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಒಟ್ಟು 82.71 ಲಕ್ಷ ಪಿಂಚಣಿ ಫಲಾನುಭವಿಗಳಿದ್ದು, ಅವರಲ್ಲಿ 16 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ಸ್ಥಗಿತಗೊಂಡಿದೆ ಎನ್ನಲಾಗಿದೆ. ಪ್ರತಿ ತಿಂಗಳು ಸುಮಾರು 400 ಕೋಟಿ ರೂಪಾಯಿಯನ್ನು ಪಿಂಚಣಿ ವಿತರಣೆಗೆ ಸರ್ಕಾರ ಖರ್ಚು ಮಾಡುತ್ತಿದ್ದು, ಮನೆ ಖರ್ಚು ಹಾಗೂ ಔಷಧಿ ವೆಚ್ಚಗಳಿಗೆ ಈ ಹಣವನ್ನು ಅವಲಂಬಿಸಿದ್ದ ವೃದ್ಧರು ಮತ್ತು ಇತರ ಫಲಾನುಭವಿಗಳು ಈಗ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಪಿಂಚಣಿ ಸ್ಥಗಿತಕ್ಕೆ ಅರ್ಜಿ ಸಲ್ಲಿಸುವ ವೇಳೆ ನೀಡಿದ್ದ ವಿಳಾಸದಲ್ಲಿ ವಾಸವಿಲ್ಲದಿರುವುದು, ಆದಾಯ ಪ್ರಮಾಣ ಪತ್ರ ಸಲ್ಲಿಸದಿರುವುದು ಹಾಗೂ ಪರಿಶೀಲನೆ ವೇಳೆ ಅಗತ್ಯ ದಾಖಲೆಗಳನ್ನು ಒದಗಿಸದಿರುವುದು ಪ್ರಮುಖ ಕಾರಣಗಳೆಂದು ತಿಳಿದುಬಂದಿದ್ದು, ವಿಳಾಸ ಸಂಬಂಧಿತ ಸಮಸ್ಯೆಯಿಂದ 2.21 ಲಕ್ಷ ಜನರ, ಆದಾಯ ಪ್ರಮಾಣ ಪತ್ರ ಸಲ್ಲಿಸದ ಕಾರಣ 45,853 ಜನರ ಹಾಗೂ ದಾಖಲೆಗಳ ಕೊರತೆಯಿಂದ 13.23 ಲಕ್ಷಕ್ಕೂ ಹೆಚ್ಚು ಜನರ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎನ್ನಲಾಗಿದೆ.




