
ಬೆಂಗಳೂರು: ಉಚಿತವಾಗಿ 4G ಯಿಂದ 5G ನೆಟ್ವರ್ಕ್ಗೆ ಅಪ್ಗ್ರೇಡ್ ಮಾಡಿಕೊಡುವುದಾಗಿ ನಂಬಿಸಿ ಸೈಬರ್ ವಂಚಕರು ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 15 ಲಕ್ಷ ರೂಪಾಯಿ ಇನ್ಸ್ಟಂಟ್ ಲೋನ್ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿಕ್ಟೋರಿಯಾ ಲೇಔಟ್ನ 50 ವರ್ಷದ ವ್ಯಕ್ತಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ತಾನು ಪ್ರಮುಖ ಟೆಲಿಕಾಂ ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಉಚಿತ 5G ಅಪ್ಗ್ರೇಡ್ ಆಫರ್ ನೀಡಿದ್ದಾನೆ. ಆತನ ಮಾತು ನಂಬಿದ ಸಂತ್ರಸ್ತರು ಕೇಳಿದ ಇಐಡಿ (Embedded Identity Document) ಸಂಖ್ಯೆಯನ್ನು ಹಂಚಿಕೊಂಡಿದ್ದು, ಅದರ ನೆರವಿನಿಂದ ವಂಚಕರು ಅವರ ಭೌತಿಕ ಸಿಮ್ ಅನ್ನು ತಮ್ಮ ಡಿವೈಸ್ನಲ್ಲಿ ಇ-ಸಿಮ್ (e-SIM) ಆಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಸಂತ್ರಸ್ತರ ಮೊಬೈಲ್ ನೆಟ್ವರ್ಕ್ ಸ್ಥಗಿತಗೊಂಡಿದ್ದು, ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಮೇಲಿನ ನಿಯಂತ್ರಣವನ್ನು ಪಡೆದ ವಂಚಕರು ಬ್ಯಾಂಕಿಂಗ್ ವಿವರಗಳನ್ನು ಹ್ಯಾಕ್ ಮಾಡಿ ಕೇವಲ 30 ನಿಮಿಷಗಳಲ್ಲಿ ಅವರ ಹೆಸರಿನಲ್ಲಿ 15 ಲಕ್ಷ ರೂಪಾಯಿ ಇನ್ಸ್ಟಂಟ್ ಲೋನ್ಗೆ ಅರ್ಜಿ ಸಲ್ಲಿಸಿ ಮಂಜೂರು ಮಾಡಿಸಿಕೊಂಡಿದ್ದಾರೆ. ಸಾಲದ ಮೊತ್ತದಲ್ಲಿ ಸುಮಾರು 14.6 ಲಕ್ಷ ರೂಪಾಯಿ ಖಾತೆಗೆ ಜಮೆಯಾಗುತ್ತಿದ್ದಂತೆಯೇ 2.2 ಲಕ್ಷ ರೂಪಾಯಿಯನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಖಾತೆಯಲ್ಲಿ ಅಕ್ರಮ ವ್ಯವಹಾರ ನಡೆಯುತ್ತಿರುವುದನ್ನು ಗಮನಿಸಿದ ಸಂತ್ರಸ್ತರು ತಕ್ಷಣವೇ ಬ್ಯಾಂಕ್ ಮತ್ತು ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ನೀಡಿ ಖಾತೆಯನ್ನು ಫ್ರೀಜ್ ಮಾಡಿಸಿದ್ದರಿಂದ ಉಳಿದ ಹಣ ವಂಚಕರ ಪಾಲಾಗುವುದನ್ನು ತಪ್ಪಿಸಲಾಗಿದೆ. ಕೇಂದ್ರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಇ-ಸಿಮ್ ಪರಿವರ್ತನೆ ವೇಳೆ ಒಟಿಪಿ, ಇಐಡಿ ಸಂಖ್ಯೆ ಸೇರಿದಂತೆ ಯಾವುದೇ ಗೌಪ್ಯ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.




