
ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ ಒದಗಿದ್ದು, ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಒಟ್ಟು 12,256 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಇನ್ಸ್ಪೆಕ್ಟರ್ ಆಫ್ ಇನ್ಕಂ ಟ್ಯಾಕ್ಸ್, ಸೆಂಟ್ರಲ್ ಎಕ್ಸೈಸ್, ಪ್ರಿವೆಂಟಿವ್ ಆಫೀಸರ್, ಎಕ್ಸಾಮಿನರ್, ಅಸಿಸ್ಟೆಂಟ್ ಎನ್ಫೋರ್ಸ್ಮೆಂಟ್ ಆಫೀಸರ್, ಸಬ್ ಇನ್ಸ್ಪೆಕ್ಟರ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್, ರಿಸರ್ಚ್ ಅಸಿಸ್ಟೆಂಟ್, ಡಿವಿಷನಲ್ ಅಕೌಂಟೆಂಟ್, ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್, ಸ್ಟಾಟಿಸ್ಟಿಕಲ್ ಇನ್ವೆಸ್ಟಿಗೇಟರ್ ಗ್ರೇಡ್-II, ಆಫೀಸ್ ಸೂಪರಿಂಟೆಂಡೆಂಟ್, ಸೆಕ್ಷನ್ ಹೆಡ್, ಆಡಿಟರ್, ಅಕೌಂಟೆಂಟ್, ಪೋಸ್ಟಲ್ ಅಸಿಸ್ಟೆಂಟ್, ಸೋರ್ಟಿಂಗ್ ಅಸಿಸ್ಟೆಂಟ್, ಅಪ್ಪರ್ ಡಿವಿಷನ್ ಕ್ಲರ್ಕ್, ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್, ಟ್ಯಾಕ್ಸ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ದೇಶದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ 18 ರಿಂದ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ. ಎಸ್ಸಿ, ಎಸ್ಟಿ, ಮಹಿಳಾ ಅಭ್ಯರ್ಥಿಗಳು ಹಾಗೂ ಮಾಜಿ ಸೈನಿಕರಿಗೆ ಅರ್ಜಿ ಶುಲ್ಕ ವಿನಾಯಿತಿ ಇದ್ದು, ಇತರ ಅಭ್ಯರ್ಥಿಗಳು ₹100 ಅರ್ಜಿ ಶುಲ್ಕ ಪಾವತಿಸಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಕರ್ನಾಟಕದ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಸರು ನೋಂದಣಿ ಮಾಡಿ ಅರ್ಜಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು SSC ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು ಅಥವಾ ಟೋಲ್ ಫ್ರೀ ಸಂಖ್ಯೆ 1800 309 3063 ಅನ್ನು ಸಂಪರ್ಕಿಸಬಹುದು.




