
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ, ಹಿರಿಯ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಚಿನ್ನೇಗೌಡ ಅವರು ಇಂದು ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ವಯೋಸಹಜ ಕಾಯಿಲೆಗಳು ಮತ್ತು ಆರೋಗ್ಯದಲ್ಲಿನ ಏರುಪೇರುಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 7.05ಕ್ಕೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಡಾ. ರಾಜ್ಕುಮಾರ್ ಅವರ ಕುಟುಂಬಕ್ಕೆ ಸೇರಿದ ಜಯಮ್ಮ ಅವರು ಕುಟುಂಬದ ಹಿರಿಯ ಸದಸ್ಯೆಯಾಗಿದ್ದು, ಅವರ ನಿಧನದಿಂದ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಜಯಮ್ಮ ಅವರ ಅಗಲಿಕೆಗೆ ಸ್ಯಾಂಡಲ್ವುಡ್ನ ಹಲವು ಗಣ್ಯರು, ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದು, ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.



