
ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಮತ್ತೊಮ್ಮೆ ಶಾಕ್ ನೀಡಿದ್ದು, ವಾಹನಗಳಿಗೆ “ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP)” ಅಳವಡಿಕೆಯನ್ನು ಸಾರಿಗೆ ಇಲಾಖೆ ಮತ್ತೆ ಕಡ್ಡಾಯಗೊಳಿಸಿದೆ. HSRP ಕಡ್ಡಾಯವಿಲ್ಲ ಎಂದು ನಿರ್ಲಕ್ಷ್ಯ ತೋರಿಸುತ್ತಿರುವ ವಾಹನ ಮಾಲೀಕರ ವಿರುದ್ಧ ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಇಲಾಖೆ ಸಜ್ಜಾಗಿದೆ. 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ HSRP ನಿಯಮ ಅನ್ವಯವಾಗಲಿದ್ದು, ನಂಬರ್ ಪ್ಲೇಟ್ ಅಳವಡಿಸದಿದ್ದರೆ ಭಾರೀ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದುವರೆಗೆ ವಾಹನ ಸವಾರರ ಮೇಲೆ ದಂಡ ವಿಧಿಸದಿದ್ದರೂ, ಇನ್ನು ಮುಂದೆ HSRP ಇಲ್ಲದ ವಾಹನಗಳಿಗೆ ದಂಡ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಿದೆ. ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ವಾಹನಗಳು ಇನ್ನೂ HSRP ಅಳವಡಿಸಿಕೊಳ್ಳದಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಗದ ಹಿನ್ನೆಲೆ ಇದೀಗ ದಂಡಾತ್ಮಕ ಕ್ರಮಕ್ಕೆ ಮುಂದಾಗಿದೆ. ಸಾರಿಗೆ ಸಚಿವ ಭೈರತಿ ಸುರೇಶ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಹಳೆಯ ವಾಹನಗಳಿಗೂ HSRP ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. HSRP ಎಂದರೆ ಅಲ್ಯೂಮಿನಿಯಂನಿಂದ ತಯಾರಿಸಲ್ಪಟ್ಟ ಅತ್ಯಾಧುನಿಕ ಭದ್ರತಾ ನಂಬರ್ ಪ್ಲೇಟ್ ಆಗಿದ್ದು, ವಾಹನ ಕಳ್ಳತನ ತಡೆಗಟ್ಟಲು, ವಾಹನಗಳ ಗುರುತಿನ ಪರಿಶೀಲನೆ ಸುಲಭಗೊಳಿಸಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಹೀಗಾಗಿ ಇನ್ನೂ HSRP ಅಳವಡಿಸದ ವಾಹನ ಸವಾರರು ಶೀಘ್ರವೇ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ.




