
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಇದುವರೆಗೆ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೆ ಇನ್ನು ಮುಂದೆ ಉಚಿತ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲು ಯೋಜನೆ ರೂಪಿಸಿದೆ. ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪರಿಷ್ಕರಣೆ ಚರ್ಚೆಯ ನಡುವೆಯೇ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸುಮಾರು 2 ಕೋಟಿಗೂ ಅಧಿಕ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು ವಿಶೇಷ ಉದ್ದೇಶಿತ ವಾಹನ (SPV) ರಚಿಸಲಾಗಿದೆ. ಕಾರ್ಡ್ನ ಸ್ವರೂಪ, ತಾಂತ್ರಿಕ ವ್ಯವಸ್ಥೆ, ಟೆಂಡರ್ ಹಾಗೂ ವಿತರಣಾ ಪ್ರಕ್ರಿಯೆ ಕುರಿತು ಸಲಹೆ ನೀಡಲು ವಹಿವಾಟು ಸಲಹೆಗಾರರ ಸಮಿತಿಯನ್ನು ನೇಮಕ ಮಾಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಸರ್ಕಾರ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಕಾರ್ಡ್ಗಳನ್ನು ವಿತರಿಸಲಾಗುತ್ತಿದ್ದು, ಮಹಿಳೆಯರಿಗೆ ಉಚಿತವಾಗಿ ನೀಡಲಾಗುವ ಕಾರ್ಡ್ನ ಸಂಸ್ಕರಣಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಆದರೆ ಪುರುಷ ಪ್ರಯಾಣಿಕರು ನಿಗದಿತ ಶುಲ್ಕ ಪಾವತಿಸಿ ಸ್ಮಾರ್ಟ್ ಕಾರ್ಡ್ ಖರೀದಿಸಬೇಕಾಗುತ್ತದೆ. ಮಹಿಳೆಯರು ಮತ್ತು ಪುರುಷರನ್ನು ಸೇರಿಸಿ ಸುಮಾರು 2.5 ರಿಂದ 3 ಕೋಟಿ ಕಾರ್ಡ್ಗಳ ಅಗತ್ಯವಿರಬಹುದು ಎಂದು ಅಂದಾಜಿಸಲಾಗಿದ್ದು, ಇದರ ಜೊತೆಗೆ ಸಾರ್ವಜನಿಕ ಸಾರಿಗೆಯನ್ನು ಪರಿಸರ ಸ್ನೇಹಿಯಾಗಿಸಲು ನಾಲ್ಕು ಸಾರಿಗೆ ನಿಗಮಗಳಿಗೆ ಹಂತಹಂತವಾಗಿ 4 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸುವ ಯೋಜನೆಯೂ ಸರ್ಕಾರದ ಮುಂದಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.




