
ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಹಲಗಾರ್-ಆಲಂದೂರು ಗ್ರಾಮದಲ್ಲಿ ಮೇಯಲು ತೆರಳಿದ್ದ ಎರಡು ಎತ್ತುಗಳು ಆಕಸ್ಮಿಕವಾಗಿ ಸುಮಾರು 20 ಅಡಿ ಆಳದ ತೆರೆದ ಬಾವಿಗೆ ಬಿದ್ದ ಪರಿಣಾಮ ದುರಂತ ಅಂತ್ಯ ಕಂಡಿವೆ. ಬಾವಿಯೊಳಗೆ ತುಂಬಿದ್ದ ಕೆಸರಿನಲ್ಲಿ ಸಿಲುಕಿಕೊಂಡ ಎತ್ತುಗಳು ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿ ನರಳಾಡುತ್ತಿದ್ದವು. ಎತ್ತುಗಳ ಈ ನರಳಾಟ ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸುಧೀರ್ಘ ಕಾರ್ಯಾಚರಣೆ ನಡೆಸಿ ಎತ್ತುಗಳನ್ನು ಮೇಲಕ್ಕೆತ್ತಲು ಹರಸಾಹಸಪಟ್ಟರೂ, ಕೆಸರಿನಲ್ಲಿ ಸಿಲುಕಿ ಉಸಿರುಗಟ್ಟಿದ ಕಾರಣ ಎರಡೂ ಎತ್ತುಗಳು ಮೃತಪಟ್ಟಿವೆ. ಮೇಯುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಎತ್ತುಗಳನ್ನು ರಕ್ಷಿಸಲು ನಡೆದ ಪ್ರಯತ್ನಗಳು ವಿಫಲವಾದ ಪರಿಣಾಮ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಕಾಲುದಾರಿಯ ಪಕ್ಕದಲ್ಲೇ ಇರುವ ಈ ತೆರೆದ ಬಾವಿಯೇ ದುರಂತಕ್ಕೆ ಕಾರಣವಾಗಿದ್ದು, ಇಂತಹ ಅನಾಹುತಗಳು ಮರುಕಳಿಸದಂತೆ ಬಾವಿಯನ್ನು ತಕ್ಷಣ ಮುಚ್ಚುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.




