
ನೀವು ಇದನ್ನು ಗಮನಿಸುತ್ತಿದ್ದೀರಾ? ತೀರಾ ಇತ್ತೀಚೆಗೆ ಅಂದರೆ ನಾಲ್ಕಾರು ವರ್ಷಗಳಿಂದೀಚೆಗೆ ಎಷ್ಟೊಂದು ಬದಲಾವಣೆ ಆಗಿದೆ, ಮತ್ತು ಆಗುತ್ತಿದೆ. ನಾನು ನಮ್ಮ ಸುತ್ತಲಿನ ಪರಿಸರದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಹೇಳುತ್ತಿಲ್ಲ. ಅದು ಬಿಡಿ, ಆಗಲೇಬೇಕು ಆಗುತ್ತದೆ. ನಮ್ಮೊಳಗಿನ ಬದಲಾವಣೆ ಕುರಿತು ನಾನು ಹೇಳುತ್ತಿರುವುದು. ನಿಮಗೆ ಯಾವತ್ತಾದರೂ ಅನಿಸಿದೆಯಾ? ಮೊದ್ಲು ನಾನು ಹೀಗಿರ್ಲಿಲ್ಲ ಅಂತ. ಅಥವಾ ನಿಮ್ಗೆ ಯಾರಾದ್ರೂ ಹೇಳಿರಬೇಕಲ್ವ ಮುಂಚೆ ನೀನು ಹಿಂಗಿರ್ಲಿಲ್ಲ ಅಂತ! ಎಸ್! ಖಂಡಿತವಾಗಿ ಇಂಥದ್ದೊಂದು ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತೆ. ಅದ್ಯಾಕೋ ಗೊತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ನಾವು ಯಾಂತ್ರಿಕವಾಗಿ ಬದುಕತೊಡಗುತ್ತಿದ್ದೇವೆ. ಬಂಧುಬಳಗ, ಗೆಳೆಯರು ಊಹುಂ ಯಾರು ಬೇಡ, ಅಷ್ಟೇ ಅಲ್ಲ ಕೆಲವು ಸಲ ಸುತ್ತಲಿನ ಆಗು ಹೋಗುಗಳ ಬಗ್ಗೆಯೂ ನಮಗೆ ಯಾವ ಆಸಕ್ತಿಯೂ ಇರುವುದಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಬದುಕುವವರ ಜೀವನ ಶೈಲಿ ಹೀಗೆ ಯಾಂತ್ರಿಕವಾಗಿರುತ್ತದೆ. ಅಲ್ಲಿನ ವಾತಾವರಣಕ್ಕದು ಅನಿವಾರ್ಯ. ಆದರೆ ನಮ್ಮ ಊರುಗಳಲ್ಲಿ ಅಂತಹ ಪರಿಸ್ಥಿತಿ ಇಲ್ಲ ಅಲ್ವಾ? ಆದರೂ ನಮ್ಮ ಬದುಕು ಒಂದು ಚೌಕಟ್ಟಿನೊಳಗೆ ಮುದುಡಿಕೊಂಡಂತಿದೆ ಅಂತ ಅನಿಸುತ್ತೆ ತಾನೆ! ಈ ಹಿಂದೆ ಯಾವುದೋ ಹೋಟೆಲಿನಲ್ಲಿ ಕುಳಿತು ಅರ್ಧ ಟೀ ಕುಡಿದು ಒಳ್ಳೆಯದೋ ಕೆಟ್ಟದ್ದೋ ಒಂದಿಷ್ಟು ಜನ ಕುಳಿತು ಹರಟೆ ಹೊಡೆದು ಹೋಗುತ್ತಿದ್ದರು ಈಗ ಅದೆಲ್ಲಿದೆ? ಹಳ್ಳಿಯಲ್ಲಿರೋ ಪುಟ್ಟ ಗೂಡಂಗಡಿಯ ಮುಂದೆ ಸಂಜೆ ಹೊತ್ತು ಒಂದಿಷ್ಟು ಗಂಡಸರು ಗುಂಪು ಸೇರಿ ಲೋಕಾಭಿರಾಮವಾಗಿ ಹರಟುತ್ತಿದ್ದರು. ಈಗ ಅದೂ ಇಲ್ಲ. ಅದೆಲ್ಲ ಹಾಗಿರಲಿ ಕಟ್ಟಿಂಗ್ ಶಾಪಿನಲ್ಲಿ ಚರ್ಚೆಯಾಗದ ವಿಚಾರಗಳೇ ಇಲ್ಲ ಅನ್ನುತ್ತಿದ್ದರು. ಊಹುಂ ಈಗ ಜನರಿಗೆ ಅಲ್ಲಿ ಕಾದು ಕುಳಿತು ಕ್ಷೌರ ಮಾಡಿಸಿಕೊಳ್ಳುವ ತಾಳ್ಮೆಯೂ ಇಲ್ಲ. ಹಾಗಾಗಿ ಅಲ್ಲಿಯೂ ಜನರೊಡನೆ ಬೆರೆತು ಹರಟುವವರಿಲ್ಲ. ಅದೆಲ್ಲದರ ಮಾತು ಹಾಗಿರಲಿ ನಮ್ಮ ಮನೆಯ ಹೆಂಗಸರು, ಹೆಣ್ಣುಮಕ್ಕಳು ಅಂಗಳದ ಕಾಂಪೌಂಡಿಗೆ ಒರಗಿ ನಿಂತು ಊರಿನ ಹುಡುಗಿಯರು, ಹೆಂಗಸರೊಂದಿಗೆ ತಾಸುಗಟ್ಟಲೇ ಹರಟುತ್ತಿದ್ದರಲ್ಲ ಈಗ ಆ ಮಾತುಗಳು ಎಲ್ಲಿವೆ? ಇನ್ನೂ ಇಂದಿನ ಯುವಕ ಯುವತಿಯರ ಕತೆ ತೀರಾ ಹದಗೆಟ್ಟು ಹೋದಂತಿದೆ. ಸಭೆ ಸಮಾರಂಭಗಳಿಗೆ ಮುಂಚೂಣಿಯಲ್ಲಿ ಸಿಂಗರಿಸಿಕೊಂಡು ಓಡಾಡುತ್ತಿದ್ದ ಹುಡುಗ ಹುಡುಗಿಯರಿಗೆ ಈಗ ಕಾರ್ಯಕ್ರಮಗಳೆಂದರೆ ಅಲರ್ಜಿ. ಬರೀ ಕಾರ್ಯಕ್ರಮಗಳು ಅಂತಲ್ಲ, ತೀರಾ ಮನೆಯಿಂದ ಈಚೆ ಬರುವುದೇ ಇಷ್ಟವಾಗಲ್ಲ. ಆಗೆಲ್ಲ ಬೇಸಿಗೆ ರಜೆಯಲ್ಲಿ ಊರಿನ ಮಕ್ಕಳು ಕಾಡು ಮೇಡು ಅಂತ ಅಲೆದಾಡುತ್ತಿದ್ದರು. ಈಗ ಮೊಬೈಲ್, ಲ್ಯಾಪ್ಟಾಪ್, ಟಿವಿ ಬಿಟ್ಟು ಬೇರೆ ಮನೋರಂಜನೆಯೇ ಗೊತ್ತಿಲ್ಲ. ಈ ಎಲ್ಲಾ ಬದಲಾವಣೆಗಳು ನಮ್ಮ ಗಮನಕ್ಕೆ ಬಂದಿದ್ದರೂ ನಾವು ಅದರ ಬಗ್ಗೆ ಅಷ್ಟಾಗಿ ಯೋಚಿಸಿಲ್ಲ. ಮೊದಲು ತುಂಬು ಕುಟುಂಬ ಅಥವಾ ಕೂಡು ಕುಟುಂಬದಲ್ಲಿರುತ್ತಿದ್ದ ನಾವು ಕ್ರಮೇಣ ಅಪ್ಪ, ಅಮ್ಮ, ಮಕ್ಕಳು ಅಷ್ಟೆ ಎಂಬಂತಾಯಿತು. ಇದರಿಂದ ಅದೆಷ್ಟೋ ಜನರಿಗೆ ಅಜ್ಜ, ಅಜ್ಜಿಯ ಕಥೆ, ಹೆಗಲಮೇಲಿನ ಆನೆ ಸವಾರಿ, ಪ್ರೀತಿ ಎಲ್ಲವೂ ಮಿಸ್ ಆಗಿ ಬಿಡ್ತು. ಇದೀಗ ಅದೆಷ್ಟೋ ಮಕ್ಕಳಿಗೆ ಅಪ್ಪ ಅಮ್ಮನ ಪ್ರೀತಿಯೂ ದಕ್ಕದಂತಾಗಿದೆ. ಅಂದರೆ ನಮ್ಮ ಮನೆಯಲ್ಲಿ ನಾವೇ ಅಪರಿಚಿತರು ಎಂಬ ವಾತಾವರಣ ಏರ್ಪಾಡಾಗಿದೆ. ಈ ಕುರಿತು ಯಾರಿಗೂ ಬೇಸರವಿಲ್ಲ. ಕಾರಣ ವಾಟ್ಸ್ಪ್, ಪೇಸ್ಬುಕ್ನಲ್ಲಿ ಬ್ಯುಸಿ! ನೀವು ಗಮನಿಸಿ ನೋಡಿ, ನಾವು ಈ ಹಿಂದೆ ನಮಗೆ ಆಗುವ ಸಂತೋಷ, ಬೇಸರ ಇವೇ ಮುಂತಾದ ಭಾವನೆಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳುತ್ತಿದ್ದೆವು. ಹಾಗೆಯೇ ಅವರು ಕೂಡ ತಮ್ಮ ಮನದಾಳದ ಮಾತುಗಳನ್ನು ನಿಮ್ಮೆದಿರು ತೆರೆದಿಡುತ್ತಿದ್ದರು. ಆದರೆ ಈಗ ಊಹುಂ ಬೇರೆಯವರ ನೋವು ಕೇಳುವುದಿರಲಿ, ನಿಮ್ಮ ಭಾವನೆಯನ್ನು ಕೂಡ ನೀವು ಹಂಚಿಕೊಳ್ಳುತ್ತಿಲ್ಲ. ಅದನ್ನು ವಾಟ್ಸ್ಪ್, ಪೇಸ್ಬುಕ್ನ ಸ್ಟೇಟಸ್ನಲ್ಲಿ ಹಾಕುತ್ತೀರಿ! ಅಂದರೆ ನಿಮ್ಮ ಸ್ಟೇಟಸ್ ನೋಡಿ ನಿಮ್ಮನ್ನ ಅರ್ಥಮಾಡಿಕೊಳ್ಳಬೇಕು! ಎಂಥಹ ವಿಪರ್ಯಾಸ! ಹೇಳಿ, ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾ? ಸ್ನೇಹಿತರೇ, ನಿಮ್ಮ ಬಳಿ ಏನೇ ಇರಲಿ ಆದರೆ ಆತ್ಮೀಯರೊಂದಿಗೆ ಒಂದಿಷ್ಟು ಸಮಯ ಕಳೆದು ಹರಟುವುದನ್ನು ಬಿಡಬೇಡಿ. ಸಂಬಂಧಗಳು ಮೊಬೈಲ್ ನೆಟ್ವರ್ಕ್ ಆಧಾರದಲ್ಲಿ ಇರಬಾರದು. ಬದಲಾಗಿ ಮನುಷ್ಯತ್ವದ ನೆಲೆಯಲ್ಲಿ ಗಟ್ಟಿಗೊಳ್ಳಬೇಕು ಏನಂತೀರಿ?




