ಬೆಂಗಳೂರು: ಸಿನಿಮಾವನ್ನೇ ಮೀರಿಸುವ ರೀತಿಯ ಮಹಾ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇನ್ನೊಬ್ಬರ ಪ್ರಮಾಣಪತ್ರ ಬಳಸಿಕೊಂಡು ಸುಮಾರು 40 ವರ್ಷಗಳ ಕಾಲ BESCOMನಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕಿಲಾಡಿಯ ಕಥೆ ಇದೀಗ ರಾಜಾಜಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 1982ರಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದಲ್ಲಿ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್ಮನ್ ಹುದ್ದೆಯ ಸಂದರ್ಶನಕ್ಕೆ ತೆರಳಿದ್ದಾಗ, ಸಂದರ್ಶನ ರದ್ದಾದ ಹಿನ್ನೆಲೆ ವಾಪಸ್ ಹೋಗುವ ವೇಳೆ ತಮ್ಮ ಮಾರ್ಕ್ಸ್ ಕಾರ್ಡ್ ಹಾಗೂ ಪ್ರಮಾಣಪತ್ರಗಳನ್ನು ಅಲ್ಲೇ ಕಳೆದುಕೊಂಡಿದ್ದರು. ಇದೇ ವೇಳೆ ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನ ಕೈಗೆ ಆ ದಾಖಲೆಗಳು ಸಿಕ್ಕಿದ್ದು, ತಾನೇ ‘ರಾಚಯ್ಯ’ ಎಂದು ಹೇಳಿಕೊಂಡು ನಕಲಿ ಗುರುತಿನ ಮೂಲಕ ಸರ್ಕಾರಿ ಉದ್ಯೋಗ ಪಡೆದುಕೊಂಡಿದ್ದಾನೆ ಎನ್ನಲಾಗಿದೆ. ನಂತರ ಹಲವು ವರ್ಷಗಳ ಕಾಲ ರಾಚಯ್ಯ ಹೆಸರಲ್ಲೇ ಕೆಲಸ ಮಾಡಿ ಹಂತ ಹಂತವಾಗಿ ಪದೋನ್ನತಿ ಪಡೆದಿದ್ದ ಬೊಮ್ಮೇಗೌಡ, 2003ರಲ್ಲಿ ಕೋರ್ಟ್ ಅಫಿಡವಿಟ್ ಮೂಲಕ ತನ್ನ ಹೆಸರನ್ನು ಅಧಿಕೃತವಾಗಿ ಬೊಮ್ಮೇಗೌಡ ಎಂದು ಬದಲಿಸಿಕೊಂಡರೂ ಇಲಾಖೆಗೆ ಅನುಮಾನ ಬಾರದಂತೆ ಜೀವನ ಸಾಗಿಸಿದ್ದಾನೆ. ಇತ್ತ ಅಸಲಿ ರಾಚಯ್ಯ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದರೆ, 2019ರಲ್ಲಿ ತನ್ನ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿ ಬೆಸ್ಕಾಂನಲ್ಲಿ ಹಿರಿಯ ಶ್ರೇಣಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವುದು ಗೊತ್ತಾಗಿ ಬೊಮ್ಮೇಗೌಡನನ್ನು ಪ್ರಶ್ನಿಸಿದ್ದಾನೆ. ಜೈಲು ಶಿಕ್ಷೆಯ ಭಯದಿಂದ ಬೊಮ್ಮೇಗೌಡ ವರ್ಷಕ್ಕೆ 2ರಿಂದ 3 ಲಕ್ಷ ರೂಪಾಯಿ ನೀಡಲು ಒಪ್ಪಿಕೊಂಡಿದ್ದು, 2022ರಲ್ಲಿ ನಿವೃತ್ತಿಯಾದ ಬಳಿಕ ಬಂದ ಸೆಟಲ್ಮೆಂಟ್ ಹಣದಿಂದ ಮಧ್ಯಸ್ಥಿಕೆ ವಹಿಸಿದ್ದ ನಿವೃತ್ತ ಎಂಜಿನಿಯರ್ ಸುಭಾಷ್ ಮೂಲಕ 10 ಲಕ್ಷ ರೂಪಾಯಿಯನ್ನು ರಾಚಯ್ಯನಿಗೆ ನೀಡಿದ್ದಾನೆ. ಆದರೆ ಬಳಿಕ ಪೆನ್ಷನ್ ಹಣದಲ್ಲೂ ಅರ್ಧ ಪಾಲು ಬೇಕೆಂದು ರಾಚಯ್ಯ ಒತ್ತಾಯಿಸಿದಾಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ, ಕೊನೆಗೆ ರಾಚಯ್ಯ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದಾನೆ. ತನಿಖೆಯಲ್ಲಿ ವಂಚನೆ ಸಾಬೀತಾಗಿದ್ದು, ರಾಜಾಜಿನಗರ ಪೊಲೀಸರು ಬೊಮ್ಮೇಗೌಡ, ರಾಚಯ್ಯ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಸುಭಾಷ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
