
ಮೂಡಿಗೆರೆ: ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕಿನ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪತ್ರಕರ್ತರ ಸಂಘದಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆ ಹಾಗೂ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಮಾಧ್ಯಮಗಳು ಸಮಾಜದ ಪರಿವರ್ತನೆ ಮತ್ತು ಜನಜಾಗೃತಿಗೆ ಪೂರಕವಾದ ಸುದ್ದಿಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು. ಸುದ್ದಿಮಾಧ್ಯಮಗಳು ಸಮಾಜದ ನಾಲ್ಕನೇ ಅಂಗವಾಗಿದ್ದು, ಸಾಮಾಜಿಕ ಸಮಸ್ಯೆಗಳನ್ನು ಬೆಳಕಿಗೆ ತರುವುದರ ಜೊತೆಗೆ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಜವಾಬ್ದಾರಿಯನ್ನೂ ಹೊಂದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮಾಧ್ಯಮಗಳು ಪರಸ್ಪರ ಸ್ಪರ್ಧೆಯ ಭರಾಟೆಯಲ್ಲಿ ಅಗತ್ಯವಿಲ್ಲದ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದರಿಂದ ಜನರು ಮಾಧ್ಯಮಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಮಾಧ್ಯಮಗಳು ಸಮಾಜಮುಖಿ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಚಿತ್ರಕಲೆ ಸ್ಪರ್ಧೆ ವೀಕ್ಷಿಸಿದ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಸಿಗದ ಕಾರಣ ಅನೇಕ ಮಕ್ಕಳಲ್ಲಿರುವ ಪ್ರತಿಭೆಗಳು ಹೊರಹೊಮ್ಮುತ್ತಿಲ್ಲ. ಆದ್ದರಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಬಿಡಿಸುವ ವಿಷಯ ನೀಡಿರುವುದು ಶ್ಲಾಘನೀಯವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮ ಮತ್ತಷ್ಟು ವೃದ್ಧಿಯಾಗಲಿದೆ ಎಂದು ಹೇಳಿದರು.
ಚಿತ್ರಕಲೆ ಸ್ಪರ್ಧೆಯಲ್ಲಿ ಎಂಇಎಸ್ ಶಾಲೆಯ ವಿದ್ಯಾರ್ಥಿ ಅಂಗದ್ ಅವಿನಾಶ್ ಭಟ್ ಪ್ರಥಮ, ಬಣಕಲ್ ವಿದ್ಯಾಭಾರತಿ ಶಾಲೆಯ ಬಿ.ಎಲ್. ಲೋಚನ್ ದ್ವಿತೀಯ ಹಾಗೂ ಬಿ.ಎಸ್. ಸಾತ್ವಿಕಾ ತೃತೀಯ ಸ್ಥಾನ ಪಡೆದರು. ಸಮಾಧಾನ ಬಹುಮಾನವನ್ನು ಬೆಥನಿ ಶಾಲೆಯ ಕೆ.ಆರ್. ಐಶ್ವರ್ಯ, ಜಿ.ಜಿ. ಸಿಂಚನ, ನಳಂದ ಶಾಲೆಯ ವಿಶ್ರುತ್ ರಾಜ್, ಬಣಕಲ್ ಶಾಲೆಯ ಕೆ.ಎಸ್. ವೇಧ, ವುಡ್ಬ್ರಿಡ್ಜ್ ಶಾಲೆಯ ಬಿ.ವೈ. ಧನ್ವೀರ್, ಬಣಕಲ್ ನಝರತ್ ಶಾಲೆಯ ಮೇಲ್ರಿಕ್ ಡಿಸೋಜಾ ಹಾಗೂ ರಿವರ್ ವ್ಯೂವ್ ಶಾಲೆಯ ಆರ್. ಚೇತಸ್ ಪಡೆದುಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ್ ಅತ್ತಿಗೆರೆ ವಹಿಸಿದ್ದರು. ತೀರ್ಪುಗಾರರಾಗಿ ವಸಂತ್, ಕೆ.ಎಸ್. ಪೃತ್ವಿಕ್ ಹಾಗೂ ಬಿ. ನಯನಾ ಕಾರ್ಯನಿರ್ವಹಿಸಿದರು. ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ. ರತನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಮಂಜಪ್ಪ, ದೀಪಕ್ ದೊಡ್ಡಯ್ಯ, ಭರತ್ ಬಾಳೂರು, ಬಿ.ಎಂ. ಸತೀಶ್, ವಿಕ್ರಂ ಬಣಕಲ್, ಮದುಕುಮಾರ್, ಬಿ.ಆರ್. ಭಾಲಕೃಷ್ಣ, ಬಿ.ಕೆ. ಲಕ್ಷ್ಮಣ್ ಗೌಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




