
ಬ್ರಹ್ಮಾವರ: ಹಾಸನ ಜಿಲ್ಲೆಯ ಅರೆಮಾದನಹಳ್ಳಿಯ ಶ್ರೀವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠದಲ್ಲಿ ಈ ವರ್ಷದ ಶಿಷ್ಯ ಸ್ವೀಕಾರ ಹಾಗೂ ಪೀಠದ ಉತ್ತರಾಧಿಕಾರಿಯಾದ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ಪ್ರಥಮ ಚಾತುರ್ಮಾಸ್ಯ ವ್ರತ ಜುಲೈ 29ರಿಂದ ಎರಡು ತಿಂಗಳ ಕಾಲ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಶ್ರೀವಿಶ್ವಕರ್ಮ ಜಗದ್ಗುರು ಸುಜ್ಞಾನಪ್ರಭು ಪೀಠದ ಅರೆಮಾದನಹಳ್ಳಿ ಶಾಖಾ ಮಠ ಕಜ್ಕೆಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ಕರಾವಳಿ ಭಾಗದ ಶಿಷ್ಯರನ್ನು ಆಹ್ವಾನಿಸಿದರು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಅಂಕೋಲದವರೆಗೆ ಕರಾವಳಿ ಭಾಗದ 13 ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಭೇಟಿ ನೀಡಿದ ಶ್ರೀಗಳು, ಶುಕ್ರವಾರ ಬ್ರಹ್ಮಾವರದ ಕಜ್ಕೆ ಶಾಖಾ ಮಠದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಾಸ್ತವ್ಯದಲ್ಲಿದ್ದು ಶಿಷ್ಯರನ್ನುದ್ದೇಶಿಸಿ ಮಾತನಾಡಿದರು. ಕಜ್ಕೆ ಸೇರಿದಂತೆ ಅನೇಕ ಶಾಖಾ ಮಠಗಳಲ್ಲಿ ಪ್ರತಿವರ್ಷ ಚಾತುರ್ಮಾಸ್ಯ ವ್ರತ ನಡೆಯುತ್ತಿದೆಯಾದರೂ, ಈ ವರ್ಷ ಶಿಷ್ಯ ಸ್ವೀಕಾರ ಮತ್ತು ಪೀಠದ ಉತ್ತರಾಧಿಕಾರದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮೂಲಮಠದಲ್ಲೇ ಚಾತುರ್ಮಾಸ್ಯ ವ್ರತ ನಡೆಯುತ್ತಿರುವುದರಿಂದ ಕರಾವಳಿ ಭಾಗದ ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮಹಿಳಾ ಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.





