
ಚಿಕ್ಕಮಗಳೂರು: ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನ ಝರಿ ಫಾಲ್ಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಜೀಪೊಂದು ಸುಮಾರು 40 ಅಡಿ ಪ್ರಪಾತಕ್ಕೆ ಉರುಳಿ ಕಾರ್ಮಿಕರು ವಾಸವಿದ್ದ ಲೈನ್ ಮನೆಯ ಮೇಲೆ ಬಿದ್ದ ಘಟನೆ ನಡೆದಿದೆ. ಕೇರಳ ಮೂಲದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್ 40 ಅಡಿ ಎತ್ತರದಿಂದ ಉರುಳಿದ ಪರಿಣಾಮ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಜೀಪ್ ಬಿದ್ದ ರಭಸಕ್ಕೆ ಕಾರ್ಮಿಕರ ವಾಸದ ಮನೆಗೂ ಹಾನಿಯಾಗಿದೆ. ಅದೃಷ್ಟವಶಾತ್ ಜೀಪ್ನಲ್ಲಿದ್ದ ಚಾಲಕ ಸೇರಿದಂತೆ ಮೂವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಜೀಪ್ ಚಾಲಕನ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




