
ಚಿಕ್ಕಮಗಳೂರು: ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಜನಮನ ಸೂರೆಗೊಂಡಿತು. ಪಂಚತಂತ್ರದ ಪ್ರಾಣಿಗಳ ಕಥೆಗಳನ್ನು ಇಂದಿನ ಜಾಯಮಾನಕ್ಕೆ ಒಗ್ಗಿಸಿ ಮಾಡಲಾದ ಈ ವಿಶಿಷ್ಟ ರಂಗಪ್ರಯೋಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪಂಚತಂತ್ರದ 15ಕ್ಕೂ ಹೆಚ್ಚು ಕಥೆಗಳಿಗೆ ಜೀವ ತುಂಬುವ ಮೂಲಕ ವಿಮರ್ಶಾತ್ಮಕ ಚಿಂತನೆ ಮತ್ತು ಸಾಮಾಜಿಕ ಭಾಗವಹಿಸುವಿಕೆಯನ್ನು ಪ್ರೇರೇಪಿಸಿತು. ಸುಮಾರು 500ಕ್ಕೂ ಹೆಚ್ಚು ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದು, ನಿರ್ದಿಗಿಂತ ತಂಡ ನಾಟಕವನ್ನು ಪ್ರಸ್ತುತಪಡಿಸಿತು ಹಾಗೂ ಅರುಣ್ ಲಾಲ್ ಅವರು ನಾಟಕವನ್ನು ನಿರ್ದೇಶಿಸಿದರು. ಇದೇ ಸಂದರ್ಭದಲ್ಲಿ ತೇಜಸ್ವಿ ಅವರ 88ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ‘ಕರ್ವಾಲೊ’ ಕೃತಿ ಆಧಾರಿತ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಹರ್ಷ ಕಾವೇರಿಪುರ ಪ್ರಥಮ, ನಿತೇಶ್ ದ್ವಿತೀಯ ಹಾಗೂ ಮನೋಹರ ಟಿ.ಎನ್. ತೃತೀಯ ಸ್ಥಾನ ಪಡೆದರೆ, ಪೆಟ್ರೀಷಿಯಾ, ಪೃಥ್ವಿಕ್ ಹುಲ್ಲೇಮನೆ, ಭರತ್ ಶೇಡ್ಗಾರ್ ಮತ್ತು ಪ್ರಶಾಂತ್ ಕೆ. ಪ್ರೋತ್ಸಾಹಕ ಬಹುಮಾನ ಪಡೆದರು. ಪ್ರಥಮ ಸ್ಥಾನಕ್ಕೆ 20 ಸಾವಿರ ರೂ., ದ್ವಿತೀಯ ಸ್ಥಾನಕ್ಕೆ 10 ಸಾವಿರ ರೂ. ಹಾಗೂ ಪ್ರಮಾಣ ಪತ್ರ, ತೃತೀಯ ಮತ್ತು ಪ್ರೋತ್ಸಾಹಕ ಸ್ಥಾನಗಳಿಗೆ ತಲಾ 5 ಸಾವಿರ ರೂ. ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ. ಸಿ. ರಮೇಶ್, ಸದಸ್ಯರಾದ ರಾಘವೇಂದ್ರ, ರವೀಶ್ ಬಸಪ್ಪ, ರುದ್ರಸ್ವಾಮಿ, ಕಲಾವಿದ ವಿಶ್ವಕರ್ಮ ಆಚಾರ್ಯ, ನಾಟಕ ನಿರ್ದೇಶಕ ಅರುಣ್ ಲಾಲ್, ಸಂಯೋಜಕ ಅಮಿತ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸಂತೋಷ್ ಅತ್ತಿಗೆರೆ




