
ಶೃಂಗೇರಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ 65 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶೃಂಗೇರಿ ಕುರುಬಗೇರಿ ಮಸೀದಿ ಮುಂಭಾಗ ನಡೆದಿದೆ. ತೋರೋಳ್ಳಿ ವಿದ್ಯಾರಣ್ಯಪುರ ಗ್ರಾಮದ ನಿವಾಸಿ ರಾಮಪ್ಪ ಟಿ.ಜಿ. ಮೃತರು. ಸೆಪ್ಟೆಂಬರ್ 7ರಂದು ಕೆಲಸದ ನಿಮಿತ್ತ ಶೃಂಗೇರಿ ಪಟ್ಟಣಕ್ಕೆ ಬಂದಿದ್ದ ರಾಮಪ್ಪ ಅವರು ಕುರುಬಗೇರಿಯ ಅನೀಶ್ ಅವರ ವಾಟರ್ ಸರ್ವೀಸ್ ಸ್ಟೇಷನ್ ಬಳಿ ಕೆಲಸ ಮುಗಿಸಿಕೊಂಡು ಮಸೀದಿ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಬೆಳಿಗ್ಗೆ ಸುಮಾರು 11.45ರ ವೇಳೆಗೆ ಕುರುಬಗೇರಿ ಸರ್ಕಲ್ ಕಡೆಯಿಂದ ತೆಕ್ಕೂರು ಸರ್ಕಲ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಾಮಪ್ಪ ಅವರು ರಸ್ತೆಗೆ ಬಿದ್ದು ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಅಪಘಾತದ ಬಳಿಕ ಬೈಕ್ ಚಾಲಕ ವಾಹನ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿದ್ದ ನಾರಾಯಣ ಹಾಗೂ ಶಿವಪ್ರಸಾದ್ ಅವರು ರಾಮಪ್ಪ ಅವರನ್ನು ತಕ್ಷಣ ನಾರಾಯಣ ಅವರ ಕಾರಿನಲ್ಲಿ ಶೃಂಗೇರಿಯ ಅಭಿನವ ವಿದ್ಯಾತೀರ್ಥ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿದ ಮೃತರ ಪುತ್ರಿ ಅನಿತಾ ಟಿ.ಆರ್. ಅವರು ನೀಡಿದ ದೂರಿನ ಮೇರೆಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಬೈಕ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.




