
ಹೊರನಾಡು : ಸಹ್ಯಾದ್ರಿಯ ಮಡಿಲಲ್ಲಿ ನೆಲೆಗೊಂಡಿರುವ ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನವು ಕೇವಲ ಧಾರ್ಮಿಕ ಅಥವಾ ಆಧ್ಯಾತ್ಮಿಕ ಪ್ರವಾಸ ತಾಣವಾಗಿಯೇ ಅಲ್ಲದೆ, ಪಶ್ಚಿಮ ಘಟ್ಟದ ದಟ್ಟ ಹಸಿರು ಅರಣ್ಯ, ಬೆಟ್ಟಗುಡ್ಡಗಳು ಮತ್ತು ನೈಸರ್ಗಿಕ ಸೌಂದರ್ಯದಿಂದ ಆವೃತವಾಗಿರುವ ಅಪರೂಪದ ಪುಣ್ಯಸ್ಥಳವಾಗಿ ಪ್ರಸಿದ್ಧಿ ಪಡೆದಿದೆ. ಮೂರು ದಿಕ್ಕುಗಳಿಂದ ಭದ್ರಾ ನದಿಯಿಂದ ಸುತ್ತುವರಿದು ಕೇವಲ ಒಂದು ರಸ್ತೆ ಮೂಲಕ ಸಂಪರ್ಕ ಹೊಂದಿರುವ ಈ ಪ್ರದೇಶವು ಪ್ರಕೃತಿ ಮತ್ತು ಭಕ್ತಿಯ ಅದ್ಭುತ ಸಂಗಮವಾಗಿದ್ದು, ಇಲ್ಲಿನ ತಂಪಾದ ಗಾಳಿ ಮತ್ತು ಶಾಂತ ವಾತಾವರಣವು ಭಕ್ತರನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತ ದೇವಿಯ ದರ್ಶನದತ್ತ ಆಕರ್ಷಿಸುತ್ತದೆ. ದೇಶದ ನಾನಾ ಭಾಗಗಳಿಂದ ಭಕ್ತರು ಇಲ್ಲಿ ಆಗಮಿಸಿ ಅನ್ನಪೂರ್ಣೇಶ್ವರಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದು, ಸನ್ನಿಧಾನಕ್ಕೆ ಹೋದವರು ಅನ್ನದಾನ ಸ್ವೀಕರಿಸದೇ ಮರಳುವವರೇ ಇಲ್ಲವೆಂಬುದು ಈ ಕ್ಷೇತ್ರದ ವಿಶೇಷತೆ, ಕ್ಷೇತ್ರದ ಧರ್ಮಕರ್ತರು ಯಾರನ್ನೂ ಖಾಲಿಹಸ್ತದಿಂದ ಕಳುಹಿಸದೆ ದೇವಿಯ ಪ್ರಸಾದವಾಗಿ ಪ್ರತಿದಿನ ಮುಂಜಾನೆ ಉಪಹಾರ, ಮಧ್ಯಾಹ್ನ ಮಹಾಪ್ರಸಾದ ಮತ್ತು ರಾತ್ರಿ ಭೋಜನವನ್ನು ಸರ್ವ ಭಕ್ತರಿಗೆ ನಿರಂತರವಾಗಿ ಒದಗಿಸುತ್ತಾರೆ. ದೇವಿಯ ಹೆಸರೇ ಅನ್ನಪೂರ್ಣೇಶ್ವರಿ ಎಂಬುದರಿಂದ ಅನ್ನದಾನವು ಇಲ್ಲಿ ಮಹತ್ವದ ಸೇವೆಯಾಗಿದ್ದು, ಭಕ್ತಿಭಾವ, ಸೇವಾಭಾವ ಮತ್ತು ನೈಸರ್ಗಿಕ ಸೌಂದರ್ಯದ ಸಮನ್ವಯದಿಂದ ಹೊರನಾಡು ದೇವಾಲಯವು ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೆಸರಾಗಿದೆ.







