
ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿಂದು ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್, ಸಂಯುಕ್ತ ಆಶ್ರಯದಲ್ಲಿ ಗುರು ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀ ಅಕ್ಕರವರಿಗೆ ಗುರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತೀಯ ಸನಾತನ ಧರ್ಮದಲ್ಲಿ ಗುರುಪೂರ್ಣಮಿಗೆ ಅಪಾರ ಮಹತ್ವವಿದ್ದು, ವೇದವ್ಯಾಸರು ವೇದದ ವೇದವನ್ನು ವಿಂಗಡಿಸಿ ಪ್ರತಿಯೊಬ್ಬರಿಗೂ ಅರ್ಥವಾಗುವ ಹಾಗೆ ಅರ್ಥೈಸಿ ಸರಣಿಕರಣ ಗೊಳಿಸಿದ್ದು, ಮಹಾಭಾರತವನ್ನು ರಚಿಸಿ ಜ್ಞಾನದ ಭಂಡಾರವನ್ನು ಜಗತ್ತಿಗೆ ನೀಡಿದವರು. ಸಾವಿರಾರು ವರ್ಷಗಳಿಂದಲೂ ಭಾರತದ ಜ್ಞಾನವನ್ನು ವಿಶ್ವಕ್ಕೆ ನೀಡಲಾಗುತ್ತಿದ್ದು, ಋಷಿಗಳು, ಚಿಂತಕರು, ಆಚಾರ್ಯರು, ವೇದೋತ್ತಮರು, ಪಂಡಿತರು, ಜ್ಞಾನಿಗಳ ಸಮೂಹವೇ ಜಗತ್ತಿಗೆ ಭಾರತದ ಸರ್ವತೋಮುಖ ಜ್ಞಾನವನ್ನು ನೀಡಿ ಜಗದ್ಗುರುವಾಗಿ ಪರಿವರ್ತಿತವಾಗಿದೆ. ವ್ಯಾಸ ಮಹರ್ಷಿಗಳ ಜನ್ಮ ದಿನವೇ ಗುರುಪೂರ್ಣಿಮೆ, ಗುರುಪೂರ್ಣಿಮೆಯ ದಿನದಲ್ಲಿ ಗುರುವಿಗೆ ಗೌರವಿಸಿ ಆಶೀರ್ವಾದ ಪಡೆಯುವುದು ಭಾರತೀಯರಾದ ಪ್ರತಿಯೊಬ್ಬರ ಕಾರ್ಯವಾಗಿದೆ. ಚಾಮರಾಜನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ ಅಕ್ಕ ರವರು ಸಮಸ್ತ ನಾಗರಿಕರಿಗೆ ಆಧ್ಯಾತ್ಮಿಕ ಪ್ರಭೆಯನ್ನು ನೀಡುವ ಮೂಲಕ ಉತ್ತಮ ಸೇವ ಹಾಗೂ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಸಮಾಜ ಸೇವಕ ಎಲ್ ಸುರೇಶ್ ಮಾತನಾಡಿ ಗುರುಪೂರ್ಣಿಮೆಯ ದಿನ ಗುರುವಿಗೆ ನಮನ ಸಲ್ಲಿಸಿ, ನಮ್ಮ ಜನ್ಮವನ್ನು ಪಾವನಗೊಳಿಸಿಕೊಳ್ಳಲು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಜೀವನ ನಡೆಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಜನಪದ ಗಾಯಕ ಹರದನಹಳ್ಳಿ ಸುರೇಶ್ ನಾಗ್ ಮಾತನಾಡಿ ಗುರುಪೂರ್ಣಿಮೆಯನ್ನು ಆಚರಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ ಪ್ರತಿಯೊಬ್ಬರಿಗೂ ನಮನ ಸಲ್ಲಿಸೋಣ ಎಂದರು. ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ದಾನೇಶ್ವರಿಯವರು ವಹಿಸಿ ಮಾತನಾಡಿ ಸದ್ಗುರುವಾಗಿ ಸಮಾಜಕ್ಕೆ ಸನ್ಮಾರ್ಗದ ಮೂಲಕ ಮಾನವ ಜೀವನವನ್ನು ಪವಿತ್ರ ಗೊಳಿಸಿ ಸುಖ, ಸಂತೋಷ, ನೆಮ್ಮದಿ, ಆನಂದದಿಂದ ಬದುಕಲು ಪ್ರತಿಯೊಬ್ಬರಿಗೂ ಆಧ್ಯಾತ್ಮದ ಶಕ್ತಿ ಅಗತ್ಯವಿದೆ. ಆಧ್ಯಾತ್ಮದ ಅರಿವು ಬಹಳ ಮುಖ್ಯ. ಗುರು ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದಾರೆ, ತಂದೆ ತಾಯಿಯ ನಂತರ ಗುರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತೀಯ ಧರ್ಮದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ನೀಡಲಾಗಿದ್ದು, ಗುರುಪೂರ್ಣಿಮೆಯ ದಿನ ಭಾರತದ ವ್ಯಾಸ ಮಹರ್ಷಿಗಳ ಚಿಂತನೆ ಜ್ಞಾನ ತಿಳಿಯುವುದು ಬಹಳ ಅಗತ್ಯ, ಧ್ಯಾನ ಯೋಗಗಳ ಮೂಲಕ ಸರ್ವ ಜನರು ಕೂಡ ಸಂತೋಷದಿಂದ ಬದುಕಲಿ ಎಂದು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಅಧಿಕಾರಿಗಳಾದ ಪುಷ್ಪ, ಗೀತಾ, ಶಿಕ್ಷಕರುಗಳಾದ ಪ್ರಮೀಳಾ ಊದಗಡ್ಡಿ, ಶ್ರೀನಿವಾಸ್ ಮೂರ್ತಿ, ನಾಗರಾಜ್, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಓಂ ಶಾಂತಿ ನ್ಯೂ ಸರ್ವಿಸ್ ನ ಬಿಕೆ ಆರಾಧ್ಯ ಹಾಜರಿದ್ದರು.




