
ಕೊಳ್ಳೇಗಾಲ: ಕಾಡಿನ ಆಹಾರ ಸರಪಳಿಯಲ್ಲಿ ಹುಲಿಗಳು ಪ್ರಮುಖ ಪಾತ್ರ ವಹಿಸಿದ್ದು, ಹುಲಿಗಳ ರಕ್ಷಣೆ ಎಂದರೆ ಇಡೀ ಅರಣ್ಯ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿದಂತೆಯೇ ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಶ್ರೀಪತಿ ಬಿ.ಎಸ್ ತಿಳಿಸಿದರು. ತಾಲ್ಲೂಕಿನ ತಿಮ್ಮರಾಜೀಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಹುಲಿ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2010 ರಲ್ಲಿ ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಜಾಗತಿಕ ಹುಲಿ ಶೃಂಗಸಭೆಯಲ್ಲಿ ಜುಲೈ 29 ರಂದು ಅಂತರಾಷ್ಟ್ರೀಯ ಹುಲಿ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. ವಿಶ್ವದಲ್ಲಿ ವೇಗವಾಗಿ ಕಡಿಮೆಯಾಗುತ್ತಿದ್ದ ಹುಲಿಗಳ ಸಂಖ್ಯೆಯನ್ನು ಉಳಿಸಿ, ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಸಂರಕ್ಷಿಸುವ ಉದ್ದೇಶದಿಂದ ಈ ದಿನಾಚರಣೆಯನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು. ಹುಲಿಗಳ ಸಂರಕ್ಷಣೆ ಕಾಡಿನ ಆರೋಗ್ಯ ಹಾಗೂ ಪರಿಸರ ಸಮತೋಲನ ಕಾಪಾಡಲು ಅತ್ಯಂತ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಬೆಳೆಸಿಕೊಂಡು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಲಕ್ಷ್ಮಿ ಮಾತನಾಡಿ, ಕರ್ನಾಟಕದಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, 1973 ರಲ್ಲಿ ಬಂಡೀಪುರವನ್ನು ಮೊದಲ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲಾಗಿದ್ದು, ಹುಲಿ ಇರುವ ಕಾಡು ಜೀವ ವೈವಿಧ್ಯತೆಯಿಂದ ಸಮೃದ್ಧವಾಗಿರುತ್ತದೆ ಎಂದು ತಿಳಿಸಿದರು. ವಲಯ ಅರಣ್ಯಾಧಿಕಾರಿ ವಾಸು ಬಿ.ಎಸ್. ಹುಲಿಗಳ ಗಣತಿ, ಜೀವನ ಶೈಲಿ, ಆಹಾರ ಪದ್ಧತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದ್ದು, ಇದೇ ವೇಳೆ ಕರ್ನಾಟಕದ ಹುಲಿ ಸಂರಕ್ಷಿತ ಪ್ರದೇಶಗಳ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕಳೆದ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ದೀಪಿಕಾ ಎನ್. ಹಾಗೂ ಎಲ್. ಮೋನಿಕಾ ಅವರಿಗೆ ಅರಣ್ಯ ಇಲಾಖೆಯಿಂದ ತಲಾ ೫,೦೦೦ ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಮಹೇಶ್ ಕೆ.ಎಂ. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಲಿದ್ದು, ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ, ಭರತ್. ಆರ್, ಉಪ ವಲಯ ಅರಣ್ಯಾಧಿಕಾರಿಗಳಾದ ಮಹೇಶ್, ಬಿ. ಅನಂತ ರಾಮು, ಭರತ್ ಜಿ.ಪಿ, ಪದವೀಧರ ಅಕ್ಷರಸ್ಥ ಸಹಾಯಕ ಮಹೇಶ್, ಗಸ್ತು ಅರಣ್ಯಪಾಲಕರಾದ ಸಂಜುನಾಥ ಆಯಟ್ಟಿ, ರಾಜು ಎಸ್, ಮಹೇಶ್, ಬಸವರಾಜ ಹಬ್ಬದ, ಅರಣ್ಯ ವೀಕ್ಷಕರಾದ ಆಕಾಶ್ ಸೋಪಾನ ಜೋಷಿ, ರಂಗಸ್ವಾಮಿ, ಎರೆಕಟ್ಟೆ ಆದಿವಾಸಿ ಮುಖಂಡ ಶಿವಣ್ಣ ಚೆನ್ನೇಗೌಡ, ಕರಾಳ್ಕಟ್ಟೆಯ ಶಿವನೇಗೌಡ, ಸಣ್ಣ ರಂಗ, ಮೀಸೆ ಸಿದ್ದ, ರಂಗ, ಶಾಲೆಯ ಶಿಕ್ಷಕರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.




