
ಶೃಂಗೇರಿ: ಅರಣ್ಯ ಸಂರಕ್ಷಣಾ ಕಾಯ್ದೆಗಳು, ಕಸ್ತೂರಿ ರಂಗನ್ ಮುಂತಾದವುಗಳಿಂದ ಮಲೆನಾಡಿನ ಜನರ ಬದುಕು ಅತಂತ್ರವಾಗಿದ್ದು, ವರದಿಯನ್ನು ಅನುಷ್ಠಾನಗೊಳಿಸಲು ಹೊರಟಿರುವ ಸರ್ಕಾರಕ್ಕೆ ಸರಿಯಾಗಿ ಮನವರಿಕೆ ಮಾಡುವುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವರದಿಯನ್ನು ತಿರಸ್ಕರಿಸಬೇಕು ಎಂದು ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಅಂಬಲೂರು ರಾಮಕೃಷ್ಣ ಹೇಳಿದರು. ಶೃಂಗೇರಿಯಲ್ಲಿ ಈ ಬಗ್ಗೆ ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಬೃಹತ್ ಹೋರಾಟವನ್ನು ಕೈಗೊಳ್ಳಲು ಯೋಜಿಸಿರುವ ಬಗ್ಗೆ ಮಾತನಾಡಿದರು. ಕಸ್ತೂರಿ ರಂಗನ್ ವರದಿಯು ಮಲೆನಾಡಿಗರನ್ನು ಬಲವಾದ ಕಾನೂನುಗಳ ಅಡಿಯಲ್ಲಿ ಕಟ್ಟಿಹಾಕಿದೆ. ಅದು ಮತ್ತು ಹಲವಾರು ಅವೈಜ್ಞಾನಿಕವಾದ ಅರಣ್ಯ ಕಾನೂನುಗಳು ಇಲ್ಲಿ ಬದುಕು ಮಾಡಲು ಬಿಡುವುದಿಲ್ಲ, ಕೇರಳಂ ರಾಜ್ಯದಲ್ಲಿ ರೈತರ ಭೂಮಿಗಳು, ಜನವಸತಿ ಪ್ರದೇಶಗಳು, ಸರ್ಕಾರಿ ಕಟ್ಟಡಗಳನ್ನು ಬಿಟ್ಟು ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕರ್ನಾಟಕದ ಜನತೆಗೆ ಬಹಳ ಅನ್ಯಾಯ, ಹಾಗೂ ಅನಾನುಕೂಲವಾಗಿದ್ದು, ಈಗಾಗಲೇ ಕಾಡುಕೋಣಗಳು ರೈತನು ಬೆಳೆ ಬೆಳೆಯದಂತೆ ಮಾಡಿಟ್ಟಿವೆ. ಊರೊಳಗೆ ನಿರ್ಭಯವಾಗಿ ಫಸಲನ್ನು ಹಾಳು ಮಾಡುತ್ತಾ ಭಯಹುಟ್ಟಿಸಿವೆ.ಅರಣ್ಯ ಇಲಾಖೆ ನಿಗಾ ಇಡಲು ಅಸಾಧ್ಯವಾದರೆ ರೈತರಿಗೆ ಫಸಲನ್ನು ರಕ್ಷಿಸಿಕೊಳ್ಳುವ ಹಕ್ಕಿನ ಮಸೂದೆಯಾಗಲಿ ಎಂದು ಒತ್ತಾಯಿಸಿದರು.
ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಡೆಸುತ್ತಿರುವ ಸರ್ವೆಯು ನಮ್ಮ ತಾಲೂಕಿನಲ್ಲಿ ಮುಗಿದಿದ್ದು ಹಲವಾರು ನ್ಯೂನತೆಗಳು ಇವೆ. ರೈತರು, ನಿವೇಶನ ರಹಿತರು ಸಲ್ಲಿಸಿದ ಅರ್ಜಿಗಳನ್ನು ಪುರಸ್ಕರಿಸದೆ ಅವುಗಳು ಕಾರ್ಯ ನಡೆಸಿರುವುದು ಅಲ್ಲದೆ ೨೦೦೮ ರಲ್ಲಿ ರೈತರ ಒತ್ತುವರಿ ಭೂಮಿಯನ್ನು ಹೊರತು ಪಡಿಸಿ ನಕ್ಷೆ ತಯಾರು ಮಾಡಲಾಗಿತ್ತು. ಆದರೆ ಈ ಬಾರಿ ಅದನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಬಗ್ಗೆ ಸಪ್ಟೆಂಬರ್ ೯ ರಂದು ಮಧ್ಯಾಹ್ನ ೩ ಗಂಟೆಗೆ ಶೃಂಗೇರಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು , ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನೊಳಗೊಂಡಂತೆ ಹೋರಾಟ ರೂಪಿಸಲು ಸಭೆ ಕರೆದು ಚರ್ಚಿಸಲು ಯೋಜಿಸಲಾಗಿದ್ದು, ಸರ್ವರೂ ಆಗಮಿಸುವಂತೆ ಕೋರಿದರು. ಸಭೆಯಲ್ಲಿ ಎಚ್. ಎಲ್. ತ್ಯಾಗರಾಜ್, ಕಚ್ಚೋಡಿ ರಮೇಶ್, ಅಂಗುರ್ಡಿ ದಿನೇಶ್, ಪ್ರವೀಣ್ ಬಿ ಣ, ಪ್ರಸನ್ನ ಬೇಗಾನೆ, ಕುಮಾರಸ್ವಾಮಿ, ಸುಭಾಷ್ ಕೈಮನೆ, ಉಪಸ್ಥಿತರಿದ್ದರು.




