
ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವರೇಘಟ್ಟ ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಸ್ತೆ ಎರಡೇ ತಿಂಗಳಲ್ಲಿ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ. 30ರಿಂದ 40 ಮನೆಗಳಿರುವ ಗ್ರಾಮಕ್ಕೆ ಎರಡು ತಿಂಗಳ ಹಿಂದಷ್ಟೇ ರಸ್ತೆ ನಿರ್ಮಿಸಲಾಗಿದ್ದು, ಇದೀಗ ರಸ್ತೆಯಲ್ಲಿ ಕಸ ಗುಡಿಸುವ ವೇಳೆ ಡಾಂಬರ್ ಮತ್ತು ಪುಡಿ ಜಲ್ಲಿ ಕಿತ್ತು ಬರುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ವೃದ್ಧೆಯೊಬ್ಬರು ರಸ್ತೆಯಲ್ಲಿ ಕಸ ಗುಡಿಸುವಾಗಲೇ ಪುಡಿ ಜಲ್ಲಿಯನ್ನು ಗುಡ್ಡೆ ಹಾಕಿರುವ ದೃಶ್ಯ ರಸ್ತೆಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಮಳೆಗಾಲದ ಸಂದರ್ಭದಲ್ಲೇ ಡಾಂಬರ್ ರಸ್ತೆ ನಿರ್ಮಿಸಿರುವ ಅಧಿಕಾರಿಗಳ ಕ್ರಮದ ಬಗ್ಗೆಯೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ನಿರ್ಮಿಸಿದ ರಸ್ತೆ ಬಾಳಿಕೆ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.




