ಕಾರ್ಕಳ: ಸಾರ್ವಜನಿಕರ ಆರೋಗ್ಯದ ಕಾಳಜಿಯಿಂದ ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಯಕೃತ್ (ಲಿವರ್) ಸಂಬಂಧಿತ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಆಗಸ್ಟ್ 3ರಿಂದ 5ರವರೆಗೆ ₹3,300 ಮೌಲ್ಯದ ಸಮಗ್ರ ಯಕೃತ್ ಆರೋಗ್ಯ ತಪಾಸಣಾ ಪ್ಯಾಕೇಜ್ನ್ನು ಆಸ್ಪತ್ರೆ ಪರಿಚಯಿಸಿತ್ತು. ಈ ಪ್ಯಾಕೇಜ್ನಲ್ಲಿ ಅತ್ಯಾಧುನಿಕ ಫೈಬ್ರೋಸ್ಕ್ಯಾನ್ ಮೂಲಕ ನೋವು ಮತ್ತು ಸೂಜಿ ಇಲ್ಲದೆ ಯಕೃತ್ನ ಗಡಸುತನ ಹಾಗೂ ಫ್ಯಾಟಿ ಲಿವರ್ ಸಮಸ್ಯೆ ಪತ್ತೆಹಚ್ಚುವ ಸೌಲಭ್ಯ, ಅಲ್ಟ್ರಾಸೌಂಡ್, ರಕ್ತ ಪರೀಕ್ಷೆಗಳು, ಹೆಪಟೈಟಿಸ್ ಬಿ ಮತ್ತು ಸಿ ತಪಾಸಣೆ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಸಮಾಲೋಚನೆ ಒಳಗೊಂಡಿತ್ತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಉಪ ವೈದ್ಯಕೀಯ ಅಧೀಕ್ಷಕ ಡಾ. ಶಿರನ್ ಶೆಟ್ಟಿ ಅವರು, ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಫ್ಯಾಟಿ ಲಿವರ್ ಸೇರಿದಂತೆ ವಿವಿಧ ಯಕೃತ್ ಸಮಸ್ಯೆಗಳನ್ನು ಪತ್ತೆಹಚ್ಚಲು ಫೈಬ್ರೋಸ್ಕ್ಯಾನ್ ಪರಿಣಾಮಕಾರಿ ಪರೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಅವರು, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಭವಿಷ್ಯದ ಗಂಭೀರ ಲಿವರ್ ಸಮಸ್ಯೆಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಈ ಸೇವೆ ಅಪಾಯಿಂಟ್ಮೆಂಟ್ ಆಧಾರದ ಮೇಲೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 97316 01150 ಅಥವಾ 08258-230583 ಸಂಪರ್ಕಿಸಬಹುದಾಗಿದೆ. ಇದೇ ವೇಳೆ ಸಾರ್ವಜನಿಕರು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಆಗಸ್ಟ್ 19ರಿಂದ ಉಚಿತ ಹಲ್ಲಿನ ತಪಾಸಣೆ ಮತ್ತು ಸಮಾಲೋಚನಾ ಶಿಬಿರ ಆರಂಭವಾಗಿದೆ. ಶಿಬಿರದಲ್ಲಿ ತಪಾಸಣೆಯ ಜೊತೆಗೆ ಅಗತ್ಯವಿರುವ ರೋಗಿಗಳಿಗೆ ರೂಟ್ ಕೆನಾಲ್ ಚಿಕಿತ್ಸೆ, ದಂತ ಫಿಲ್ಲಿಂಗ್, ಸ್ಕೇಲಿಂಗ್ ಮತ್ತು ಪಾಲಿಶಿಂಗ್, ಹಲ್ಲು ಹೊರತೆಗೆಯುವಿಕೆ, ಡೆಂಟಲ್ ಕ್ರೌನ್ಸ್ ಮತ್ತು ಬ್ರಿಜ್ ಹಾಗೂ ದಂತ ಇಂಪ್ಲಾಂಟ್ ಸೇರಿದಂತೆ ವಿವಿಧ ಚಿಕಿತ್ಸೆಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ವೃದ್ಧರು, ಗೃಹಿಣಿಯರು ಹಾಗೂ ಉದ್ಯೋಗಸ್ಥ ವೃತ್ತಿಪರರಿಗೆ ಅನುಕೂಲವಾಗುವಂತೆ ಊಟದ ಸಮಯದಲ್ಲಿಯೂ ಅಪಾಯಿಂಟ್ಮೆಂಟ್ ಸೌಲಭ್ಯ ಕಲ್ಪಿಸಲಾಗಿದೆ. ದಂತ ಚಿಕಿತ್ಸಾ ತಜ್ಞರು ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ಸಮಾಲೋಚನೆಗೆ ಲಭ್ಯವಿರಲಿದ್ದು, ಹೆಚ್ಚಿನ ಮಾಹಿತಿ ಹಾಗೂ ಅಪಾಯಿಂಟ್ಮೆಂಟ್ಗಾಗಿ 7619129090 ಸಂಪರ್ಕಿಸಬಹುದು. ಹಲ್ಲಿನ ಸಮಸ್ಯೆಗಳನ್ನು ತೀವ್ರವಾಗುವವರೆಗೆ ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲೇ ತಪಾಸಣೆ ಹಾಗೂ ಸಕಾಲಿಕ ಚಿಕಿತ್ಸೆ ಪಡೆಯುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ವರದಿ: ಅರುಣ್ ಭಟ್ ಕಾರ್ಕಳ
