
ಆಕೆ ತಲೆತಗ್ಗಿಸಿ ನಿಂತಿದ್ದರು.
ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಆ ದಂಪತಿಗಳ ಜಗಳ ಉಂಡು ಮಲಗಿದ ಮೇಲೆ ಮುಗಿಯುವಂತದ್ದಾಗಿರಲಿಲ್ಲ. ಸಾಕಷ್ಟು ರಾಜಿಗಳು ನಡೆದೂ ಇದೀಗ ಒಂದಿಷ್ಟು ಜನ ಹಿರಿಯರು ಸಂಧಾನ ನಡೆಸಿ ಮುರಿದು ಬಿದ್ದ ಸಂಬಂಧವನ್ನು ಬೆಸೆಯಲು ಸೇರಿದ್ದರು. ಅವರ ಮಧ್ಯೆ ಕಿರಿಯವನಾದ ನಾನು ಇದ್ದೆ. ಹೆಚ್ಚಿನ ಸಲ ಗಂಡ ಹೆಂಡಿರ ಜಗಳದಲ್ಲಿ ಗಂಡನದೇ ತಪ್ಪಾಗಿರುತ್ತದೆ. ಆತನೇ ಹೆಂಡತಿಯನ್ನು ಹಿಂಸಿಸುತ್ತಾನೆ, ಅನುಮಾನಿಸುತ್ತಾನೆ, ಅವಮಾನಿಸುತ್ತಾನೆ ಇಂಥಹ ಸಂದರ್ಭದಲ್ಲಿ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿಮಾಡಿಸುವುದು ಸಹಜ. ಆದರೆ ಈ ಪ್ರಕರಣದಲ್ಲಿ ಹೆಂಡತಿಯದೇ ತಪ್ಪು. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಈ ಗಂಡ ಹೆಂಡತಿ ನಡುವೆ ಮತ್ತೊಬ್ಬನ ಪ್ರವೇಶವಾಗಿದೆ. ಇದರಿಂದಾಗಿ ಇವರ ಸಂಸಾರದಲ್ಲಿ ಬಿರುಕು ಮೂಡಿದೆ ಅಂತ ಊಹಿಸಿಕೊಳ್ಳಬಹುದಾದರೂ, ಆತನ ಮೋಹಕ್ಕೆ ಬಿದ್ದ ಹೆಂಡತಿ ತನ್ನ ಗಂಡನನ್ನೇ ತೊರೆಯುವ ಮಟ್ಟಕ್ಕೆ ಬಂದು ಬಿಟ್ಟಿದ್ದಾಳೆ. ಅದೇ ವಿಚಾರದ ಸಲುವಾಗಿ ಹಿರಿಯರು ಮಧ್ಯಸ್ಥಿಕೆ ವಹಿಸಿ ಗಂಡ ಹೆಂಡಿರನ್ನು ಒಂದುಗೂಡಿಸಲು ಸೇರಿದ್ದರು. ಹಿರಿಯರ ಬುದ್ದಿವಾದಕ್ಕಾಗಲೀ, ಪ್ರಶ್ನೆಗಳಿಗಾಗಲೀ, ಸಲಹೆಗಳಿಗಾಗಲೀ ಆಕೆ ಯಾವ ಪ್ರತಿಕ್ರಿಯೆ ನೀಡದೆ ತಲೆ ತಗ್ಗಿಸಿ ನಿಂತಿದ್ದಳು. ನಾನು ಆಕೆಯನ್ನೇ ಗಮನಿಸುತ್ತಾ ಇದ್ದೆ. ವಾಸ್ತವವಾಗಿ ಈ ಗಂಡ ಹೆಂಡಿರನ್ನು ಒಂದುಗೂಡಿಸುವ ಮೊದಲು ಆ ಮೂರನೇ ವ್ಯಕ್ತಿಯಿಂದ ಆಕೆಯನ್ನು ದೂರ ಮಾಡುವ ಪ್ರಯತ್ನ ಮೊದಲಾಗಬೇಕಿತ್ತು. ಅಲ್ಲಿದ್ದ ಹಿರಿಯರು ದಾಂಪತ್ಯ, ಸಮಾಜ, ಗಂಡನ ಬಗ್ಗೆಯೇ ಹೇಳುತ್ತಿದ್ದರೇ ಹೊರತು, ಆ ಮೂರನೇ ವ್ಯಕ್ತಿಯ ಕುರಿತು ಪ್ರಸ್ತಾಪವೇ ಮಾಡುತ್ತಿರಲಿಲ್ಲ. ಇಲ್ಲಿ ಗಮನಿಸಬೇಕಾದ್ದು ಏನೆಂದರೆ, ಆಕೆ ಯಾವ ಕಾರಣಕ್ಕೆ ಗಂಡನನ್ನು ಕಡೆಗಣಿಸಿ ಆತನೊಂದಿಗೆ ಸಂಬಂಧವಿರಿಸಿಕೊಂಡಳು? ಮನೆಯನ್ನು ನೋಡಿದರೆ ಗಂಡ ಯಾವುದಕ್ಕೂ ಕಡಿಮೆ ಮಾಡಿದಂತೆ ಕಾಣಲಿಲ್ಲ. ಅವರಿಬ್ಬರ ನಡುವೆ ಪ್ರೀತಿಯ ಕೊರತೆ ಇರಬಹುದಾ ಅಂತ ಅಂದುಕೊಳ್ಳೋಕೆ, ಮದುವೆಯಾಗಿ 19 ವರ್ಷಗಳಾಗಿವೆ! ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷ ಅನ್ಯೋನ್ಯವಾಗಿದ್ದ(?) ದಂಪತಿಗಳ ನಡುವೆ ಈಗ ಇದೆಂಥ ವಿರಸ? ಆಫ್ಕೋರ್ಸ್ ಮನಃಶಾಸ್ತ್ರದಲ್ಲಿ ಹುಡುಕುತ್ತಾ ಹೋದರೆ ಇಂತಹ ಸಮಸ್ಯೆಗಳು, ಅದಕ್ಕೆ ಪರಿಹಾರ, ಕಾರಣ ಎಲ್ಲಾ ಸಿಕ್ಕು ಬಿಡಬಹುದು. ಆದರೆ ಹೆಚ್ಚಿನ ಸಲ ಜನರು ಮಾನ ಮರ್ಯಾದೆ ಕುರಿತು ಯೋಚಿಸುತ್ತಾರೆಯೇ ಹೊರತು ಕೌನ್ಸೆಲಿಂಗ್ಗಾಗಿ ಸೈಕಿಯಾರ್ಟಿಸ್ಟ್ರ ಬಳಿ ಹೋಗುವುದಿಲ್ಲ. ಅದು ಒತ್ತಟ್ಟಿಗಿರಲಿ. ಮದುವೆಯಾಗಿ ಇಷ್ಟು ವರ್ಷದ ನಂತರ ಹೀಗೆ ಹೊಸದೊಂದು ಸಂಬಂಧದತ್ತ ಮುಖ ಮಾಡಿ ನಿಂತ ಆಕೆ ಆ ಗೆಳೆಯನಿಂದ ಏನನ್ನೂ ನಿರೀಕ್ಷಿಸುತ್ತಾಳೆ? ಪ್ರೀತಿ, ಭದ್ರತೆ, ಸಾಂತ್ವಾನ, ದೈಹಿಕ ಕಾಮನೆಗಳ ಈಡೇರಿಕೆ ಯಾವುದನ್ನ ಬಯಸಿ ಆಕೆ ಹೊಸದೊಂದು ಸಂಬಂಧದತ್ತ ಕೈಚಾಚುತ್ತಾಳೆ… ಹೆಣ್ಣಿನ ಮನಸ್ಸು ತುಂಬಾ ಸೂಕ್ಷ್ಮ ಗಂಡಿಗೆ ಹೋಲಿಸಿದರೆ ಆಕೆ ಹೆಚ್ಚು ಭಾವುಕಳು. ನೀವು ನಂಬಲಿಕ್ಕಿಲ್ಲ. ಆಕೆ ಚಂದನೆ ಸಿಂಗರಿಸಿಕೊಂಡಿದ್ದನ್ನ ತನ್ನ ಗಂಡ ಗುರುತಿಸದೆ ಹೋದರೆ ಆ ಬಗ್ಗೆ ಬೇಸರಿಸಿಕೊಳ್ಳೋ, ನೊಂದುಕೊಳ್ಳೋ, ಜಗಳಕ್ಕೆ ಬೀಳುವ ಮನಸ್ಥಿತಿ ಹೊಂದಿರುತ್ತಾಳೆ ಅಂತ ನನ್ನ ಸ್ನೇಹಿತರಾದ ಸೈಕಿಯಾರ್ಟಿಸ್ಟ್ ಹೇಳಿದ್ದರು. ಬಿಡಿ, ವಿಷಯಕ್ಕೆ ಬರೋಣ. ಇಷ್ಟಕ್ಕು ಆಕೆ ಗಂಡನಲ್ಲದ ಗಂಡಿಸಿನೊಂದಿಗೆ ಸಲುಗೆ ಬೆಳೆಸಿಕೊಳ್ಳುವುದು ಏಕೆ? ತೀರಾ ಮನೆಗೆ ಬಂದು ದನಕ್ಕೆ ಬಡಿದಂತೆ ಬಡಿಯುವ, ಅನುಮಾನಿಸುವ, ಅಸಡ್ಡೆಯಿಂದ, ತಾತ್ಸಾರದಿಂದ ಹೆಂಡತಿಯನ್ನು ಕಾಯುವ ಗಂಡನಿಂದ ಭಾವನಾತ್ಮಕವಾಗಿ ಆಕೆ ದೂರಾಗಿ ಬಿಡುತ್ತಾಳೆ! ಹಾಗೆ ದೂರಾದ ಹೆಂಗಸು ತನ್ನ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಯೊಬ್ಬನ ಸಾಂಗತ್ಯವನ್ನು ಬಯಸುತ್ತಾಳೆ. ಹಾಗೆ ಹತ್ತಿರಾದ ಗಂಡಿಗೆ ತನ್ನಿಂದ ಆತ ಕೈ ತಪ್ಪಿದಂತೆ ತನ್ನನ್ನೇ ತಾನು ಅರ್ಪಿಸಿಕೊಳ್ಳಲು ಅಣಿಯಾಗುತ್ತಾಳೆ. ಇದನ್ನು ನಮ್ಮ ಸಮಾಜ ಅಕ್ರಮ ಸಂಬಂಧ ಎಂಬ ಹೆಸರಿನಿಂದ ಕರೆಯುತ್ತದೆ. ಆದರೆ ಎಲ್ಲ ಸಂಬಂಧಗಳು ಇದೇ ಕಾರಣದಿಂದ ಏರ್ಪಡುತ್ತವೆ ಅಂತ ಹೇಳುವ ಹಾಗಿಲ್ಲ. ಕೆಲ ಹೆಂಗಸರು, ಹಣಕ್ಕಾಗಿ, ತೆವಲಿಗಾಗಿ, ಥ್ರಿಲ್ಗಾಗಿ ಇಂಥದ್ದೊಂದು ಸಂಬಂಧಕ್ಕೆ ಅಣಿಯಾಗುತ್ತಾರೆ. ಕ್ಷಮಿಸಿ ಅದನ್ನ ದಂಧೆ ಅಂತಾರೆ! ಆ ಸಂಗತಿ ಇಲ್ಲಿಗೆ ಅಪ್ರಸ್ತುತ, ನಾನು ಮೊದಲು ಹೇಳಿದಂತೆ ಒಂದು ಭಾವನಾತ್ಮಕವಾದ ಭಾಂದವ್ಯಕ್ಕೆ ಬೆಸೆದುಕೊಂಡ ಬಂಧವನ್ನು ಅನುಭವ ಅಂದುಕೊಂಡು ಹೊರಡುವ ಹೆಂಗಸರು ಒಂದಿಷ್ಟು ಆಲೋಚನೆಗಳನ್ನು ಮಾಡಬೇಕು. ಇದನ್ನ ಆಲೋಚನೆ ಎನ್ನುವುದಕ್ಕಿಂತ ಆತ್ಮವಲೋಕನ ಎಂದರೆ ಸರಿಯಾದಿತೇನೋ…. ನೀವು ಆಯ್ಕೆ ಮಾಡಿಕೊಂಡ ಗಂಡನಲ್ಲದ ಗಂಡಸು ನಿಮಗೆ ಭಾವನ್ಮಾತ್ಮಕವಾಗಿ ಆತ್ಮೀಯನೇ? ನಿಮ್ಮ ನೋವಿಗೆ ಆತ ಸಂತೈಸಬಹುದು, ಮರುಗಬಹುದು, ಕೊರಗಬಹುದು, ಆತನಲ್ಲಿ ನಿಜಕ್ಕೂ ಒಳ್ಳೆಯತನವೇ ಇರಬಹುದು… ಆದರೆ ಆತ ನಿಮ್ಮಿಂದ ಏನು ಬಯಸುತ್ತಾನೆ? ಇದನ್ನ ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ಗಂಡ ಹೆಂಡ್ತಿ ಸರಿ ಇಲ್ಲ ಅಂತ ತಿಳಿದು ಹತ್ತಿರಾಗೋ ಅವಕಾಶವಾದಿಗಳಿರುತ್ತಾರೆ! ಅಂಥವರ ಬಗ್ಗೆ ಎಚ್ಚರವಾಗಿರಿ. ಒಂದು ಸ್ನೇಹದ ಹಸ್ತಕ್ಕೆ ಕೈಚಾಚುವ ಮುನ್ನ ಸಾವಿರ ಸಲ ಆಲೋಚಿಸಿ. ನಿಜಕ್ಕೂ ಒಂದು ಗೆಳೆತನದ ಅಗತ್ಯವಿದೆಯಾ? ಕೆಲವರು ಗಂಡನ ವಿರುದ್ದ ಸೇಡಿಗೆ ಇನ್ಯಾರದೋ ಸ್ನೇಹ ಮಾಡುತ್ತಾರೆ. ಕೊನೆಗೆ ಅದು ಬದುಕಿನ ನೆಮ್ಮದಿಯನ್ನು ಶಾಶ್ವತವಾಗಿ ಕಿತ್ತುಕೊಂಡು ಬಿಡುತ್ತದೆ. ನಿಮ್ಮ ದೈಹಿಕ ಆಕರ್ಷಣೆಗೆ ಹತ್ತಿರಾಗುವವರನ್ನು ನಂಬಿ ಗಂಡನನ್ನು ತೊರೆದು ಹೋಗದಿರಿ. ನಾಳೆ ನಿಮಗೆ ವಯಸ್ಸಾದ ಮೇಲೆ, ದೇಹ ಬಿಸುವು ಕಳೆದುಕೊಂಡ ಮೇಲೆ ನೀವು ಆತನಿಗೆ ಬೇಡವಾಗುತ್ತೀರಿ ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ ಮಕ್ಕಳಿದ್ದರೆ, ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಗಂಡ ಹೆಂಡತಿ ಹೊಂದಾಣಿಕೆ ಸಾಧ್ಯವಾ ಅಂತ ಯೋಚಿಸಿ. ತೀರಾ ಈತನೊಂದಿಗೆ ಹೆಣಗಾಟ ಸಾಧ್ಯವೇ ಇಲ್ಲ ಅಂತ ಅನಿಸಿದ್ರೆ ಕಾನೂನು ಪ್ರಕಾರ ಆತನಿಂದ ದೂರಾಗಿ ಮಕ್ಕಳು ಯಾರೊಂದಿಗೆ ಅನ್ನುವುದು ಆಯಾ ಸಂದರ್ಭಕ್ಕೆ ತಕ್ಕಂತೆ ನಿರ್ಧಾರವಾಗುತ್ತದೆ. ಅದು ಬಿಟ್ಟು ಮಕ್ಕಳಿದ್ದಂತೆಯೇ ನೀವು ನಿಮ್ಮ ಬದುಕಿನ ತೀರಾ ಗುಪ್ತವಾಗಿ ಇರಿಸಿಕೊಳ್ಳುವ ರಹಸ್ಯವನ್ನು ಅವರೆದಿರು ತೆರೆದಿಡಬೇಡಿ. ನೀವು ಗಮನಿಸಿ ನೋಡಿ. ದಾರಿ ತಪ್ಪಿದ, ದುಶ್ಚಟಗಳಿಗೆ ಬಲಿಯಾಗೋ ಮಕ್ಕಳ ಹಿನ್ನಲೆ ಗಮನಿಸಿದರೆ ಹೆಚ್ಚಿನ ಮಕ್ಕಳ ತಂದೆ ತಾಯಿಗಳು ಇಂಥದ್ದೊಂದು ಎಡವಟ್ಟನ್ನು ಮಕ್ಕಳೆದಿರು ಮಾಡಿಕೊಂಡಿರುತ್ತಾರೆ. ನಿಮ್ಮ ಮಕ್ಕಳು ಹಾದಿ ತಪ್ಪಬಾರದು ಅಂತಾದರೆ ಹೆತ್ತವರಾದ ನಿಮ್ಮ ಹೆಜ್ಜೆ ದೃಡವಾಗಿರಬೇಕು ಹೌದು ತಾನೆ!






