
ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು 2024” ವರದಿ ಪ್ರಕಾರ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ರಾಜ್ಯದ ರಸ್ತೆಗಳು ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ರಕ್ತಸಿಕ್ತವಾಗುತ್ತಿರುವ ಆತಂಕಕಾರಿ ಚಿತ್ರಣ ಹೊರಬಿದ್ದಿದೆ. 2024ರಲ್ಲಿ ದೇಶಾದ್ಯಂತ ಒಟ್ಟು 4,67,967 ರಸ್ತೆ ಅಪಘಾತಗಳು ಸಂಭವಿಸಿ 1,75,142 ಮಂದಿ ಮೃತಪಟ್ಟಿದ್ದು, ದಿನಕ್ಕೆ ಸರಾಸರಿ 480 ರಿಂದ 546 ಮಂದಿ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ತಮಿಳುನಾಡು 67,526 ಅಪಘಾತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 55,711 ಹಾಗೂ ಕೇರಳ 46,591 ಅಪಘಾತಗಳೊಂದಿಗೆ ನಂತರದ ಸ್ಥಾನಗಳಲ್ಲಿಿವೆ. ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 43,062 ರಸ್ತೆ ಅಪಘಾತಗಳು ಸಂಭವಿಸಿದ್ದು, 12,339 ಮಂದಿ ಸಾವನ್ನಪ್ಪಿದ್ದು, ಸುಮಾರು 52,591 ಮಂದಿ ಗಾಯಗೊಂಡಿದ್ದಾರೆ. 2020ರಲ್ಲಿ ರಾಜ್ಯದಲ್ಲಿ 34,178 ಅಪಘಾತಗಳಲ್ಲಿ 9,760 ಸಾವುಗಳು ದಾಖಲಾಗಿದ್ದರೆ, 2023ರಲ್ಲಿ ಅಪಘಾತಗಳ ಸಂಖ್ಯೆ 43,440ಕ್ಕೆ ಹಾಗೂ ಸಾವುಗಳ ಸಂಖ್ಯೆ 12,323ಕ್ಕೆ ಏರಿಕೆಯಾಗಿ, 2024ರಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡರೂ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಅತಿವೇಗದ ಚಾಲನೆಯೇ ಪ್ರಮುಖ ಕಾರಣವಾಗಿದ್ದು, ಇದರಿಂದಲೇ 10,614 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶ ಮಟ್ಟದಲ್ಲಿ 61.2 ಶೇಕಡಾ ಅಪಘಾತಗಳಿಗೆ ಅತಿವೇಗ ಕಾರಣವಾಗಿದ್ದರೆ, ಅಪಾಯಕಾರಿ ಹಾಗೂ ಅಜಾಗರೂಕ ಚಾಲನೆ ಸುಮಾರು 26 ಶೇಕಡಾ ಅಪಘಾತಗಳಿಗೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 4,145 ಮಂದಿ ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ 108 ಮಂದಿ ಮೃತಪಟ್ಟಿದ್ದು, ಕುಡಿದು ವಾಹನ ಚಲಾಯಿಸುವುದು, ಮೊಬೈಲ್ ಬಳಕೆ ಹಾಗೂ ರಾತ್ರಿ ವೇಳೆ ಚಾಲನೆ ಕೂಡ ಅಪಘಾತಗಳಿಗೆ ಕಾರಣವಾಗುತ್ತಿದೆ. ದೇಶದ ಒಟ್ಟು ರಸ್ತೆ ಸಾವುಗಳಲ್ಲಿ 48.3 ಶೇಕಡಾ ಅಂದರೆ 84,599 ಮಂದಿ ಎರಡು ಚಕ್ರದ ವಾಹನ ಸವಾರರಾಗಿದ್ದು, ಕರ್ನಾಟಕದಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತಿದೆ. ಬೆಂಗಳೂರು ದೇಶದ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ನಗರದಲ್ಲಿ 4,769 ಅಪಘಾತಗಳು ದಾಖಲಾಗಿವೆ. ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗಳು ಅಪಾಯಕಾರಿ ತಾಣಗಳಾಗಿ ಗುರುತಿಸಲ್ಪಟ್ಟಿದ್ದು, 18 ರಿಂದ 35 ವರ್ಷ ವಯಸ್ಸಿನ ಯುವಕರು, ಎರಡು ಚಕ್ರದ ಸವಾರರು ಮತ್ತು ಪಾದಚಾರಿಗಳೇ ಹೆಚ್ಚು ಬಲಿಯಾಗುತ್ತಿದ್ದಾರೆ. ರಸ್ತೆ ಅಪಘಾತಗಳಿಂದ ದೇಶದ GDPಗೆ 3ರಿಂದ 3.5 ಶೇಕಡಾ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ದೇಶದ ಒಟ್ಟು ಅಪಘಾತಗಳಲ್ಲಿ 59.7 ಶೇಕಡಾ ಗ್ರಾಮೀಣ ಪ್ರದೇಶಗಳಲ್ಲೇ ಸಂಭವಿಸುತ್ತಿರುವುದು ರಸ್ತೆ ಸುರಕ್ಷತೆ ಕೇವಲ ನಗರಗಳ ಸಮಸ್ಯೆಯಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸಂಚಾರ ನಿಯಮಗಳ ಪಾಲನೆ ಮತ್ತು ಜವಾಬ್ದಾರಿಯುತ ಚಾಲನೆ ಇಲ್ಲದಿದ್ದರೆ ರಸ್ತೆಗಳು ಸ್ಮಶಾನವಾಗುವ ದಿನ ದೂರವಿಲ್ಲ ಎಂಬ ಎಚ್ಚರಿಕೆಯನ್ನು ಈ ವರದಿ ನೀಡಿದೆ.



