
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಬೈರಾಮಕ್ಕಿ ಗ್ರಾಮದಲ್ಲಿ ಪ್ರಸನ್ನ ಮತ್ತು ನಾಗರಾಜ್ ಎಂಬುವವರ ಮನೆಯಲ್ಲಿ ಏಕಕಾಲದಲ್ಲಿ ಎರಡು ಬೃಹತ್ ಗಾತ್ರದ ಸುಮಾರು 8 ಅಡಿ ಉದ್ದದ ನಾಗರಹಾವುಗಳು ಕಾಣಿಸಿಕೊಂಡು ಕುಟುಂಬಸ್ಥರ ನಿದ್ದೆ ಗೆಡಿಸಿದ ಘಟನೆ ನಡೆದಿದೆ. ಮನೆ ಸುತ್ತಮುತ್ತ ಹಾವುಗಳ ಸಂಚಾರ ಕಂಡು ಆತಂಕಗೊಂಡಿದ್ದ ವೇಳೆ, ಒಂದು ನಾಗರಹಾವು ನಾಲ್ಕು ಮೊಟ್ಟೆಗಳನ್ನು ನುಂಗಿಕೊಂಡು ಕಾಫಿ ತೋಟದ ಗಿಡದ ಬುಡದ ಪಕ್ಕದಲ್ಲಿದ್ದ ದೊಂಬಿನೊಳಗೆ ಸೇರಲು ಯತ್ನಿಸಿದ್ದು, ಮೊಟ್ಟೆ ನುಂಗಿದ್ದರಿಂದ ಮುಂದೆ ಹೋಗಲಾರದೆ ಹಿಂದಕ್ಕೆ ಬರಲಾರದೆ ಸಿಲುಕಿ ಪರದಾಡುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಖಾಂಡ್ಯ ಭಾಗದ ಖ್ಯಾತ ಉರಗ ತಜ್ಞ ಮೊಹಮ್ಮದ್ ಹನೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹನೀಫ್ ಅವರು ಸುಮಾರು ಎರಡು ಗಂಟೆಗಳ ಕಾಲ ಅತ್ಯಂತ ಎಚ್ಚರಿಕೆಯಿಂದ ಹೈ-ವೋಲ್ಟೇಜ್ ಕಾರ್ಯಾಚರಣೆ ನಡೆಸಿದ್ದು, ಎರಡೂ ಹಾವುಗಳು ಬೃಹತ್ ಗಾತ್ರದ್ದಾಗಿದ್ದರಿಂದ ಕಾರ್ಯಾಚರಣೆ ಸವಾಲಿನಿಂದ ಕೂಡಿತ್ತು. ಅದರಲ್ಲೂ ಮೊಟ್ಟೆ ನುಂಗಿ ಸಿಲುಕಿಕೊಂಡಿದ್ದ ಹಾವನ್ನು ಯಾವುದೇ ಗಾಯವಾಗದಂತೆ ಬಿಡಿಸಿ ಸುರಕ್ಷಿತವಾಗಿ ಸೆರೆ ಹಿಡಿಯುವುದು ದೊಡ್ಡ ಸವಾಲಾಗಿತ್ತು. ಕೊನೆಗೆ ಹನೀಫ್ ಅವರ ಧೈರ್ಯ ಮತ್ತು ಕೌಶಲದಿಂದ ಎರಡೂ ನಾಗರಹಾವುಗಳನ್ನು ಯಾವುದೇ ಅಪಾಯವಾಗದಂತೆ ರಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಸ್ಥಳೀಯ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು. ಈ ಘಟನೆ ಬಳಿಕ ನಾಗರಾಜ್ ಮತ್ತು ಪ್ರಸನ್ನ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ಉರಗ ತಜ್ಞ ಮೊಹಮ್ಮದ್ ಹನೀಫ್ ಅವರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನ ಹಾಗೂ ಬೇಸಿಗೆ ಸಮಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಹಾವುಗಳ ಸಂಚಾರ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.



