ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದ ಬಳಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆ ಕಾಮಗಾರಿ ಪೂರ್ಣಗೊಂಡ ಒಂದೇ ವಾರದಲ್ಲಿ ಜಲ್ಲಿ ಕಿತ್ತುಬಂದು ಸಂಚಾರಕ್ಕೆ ತೀವ್ರ ಅಡ್ಡಿಯಾಗಿರುವುದು ಬೆಳಕಿಗೆ ಬಂದಿದೆ. ಸಬ್ಬೇನಹಳ್ಳಿ–ಗುತ್ತಿ–ಮೂಲರಹಳ್ಳಿ ಮಾರ್ಗವಾಗಿ ಪ್ರವಾಸಿ ತಾಣ ದೇವರಮನೆ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಮಾರು 3 ಕಿ.ಮೀ. 800 ಮೀಟರ್ ಉದ್ದದಲ್ಲಿ ಈ ರಸ್ತೆ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ರಸ್ತೆಯ ಮೇಲ್ಭಾಗ ಸಂಪೂರ್ಣ ಹದಗೆಟ್ಟಿದ್ದು, ಇದಕ್ಕೆ ಸಂಬಂಧಿಸಿದ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಗುಣಮಟ್ಟ ಪರಿಶೀಲನೆ ಮಾಡದೇ ಕಾಮಗಾರಿಗೆ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧವೂ ಆಗ್ರಹಿಸಿದ್ದು, ಸ್ಥಳೀಯರು ಜಿಲ್ಲಾಡಳಿತವನ್ನು ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
