ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯದ ಹೆಬ್ಬೆ ವಲಯದಲ್ಲಿ ನಡೆಯುತ್ತಿದ್ದ ಹುಲಿ ಗಣತಿ ಕಾರ್ಯಾಚರಣೆ ವೇಳೆ, ಕೋಧಿ ಬೇಟೆ ನಿಗ್ರಹ ಶಿಬಿರದ ಸಮೀಪದ ಗಂಗೆಗಿರಿ ಪ್ರದೇಶದಲ್ಲಿ ಸುಮಾರು 8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ. ಕೊಳತೆಯ ಸ್ಥಿತಿಯಲ್ಲಿ ಕಂಡುಬಂದ ಈ ಹುಲಿ ಐದಾರು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದ್ದು, ಎರಡು ಗಂಡು ಹುಲಿಗಳ ನಡುವೆ ನಡೆದ ಕಾದಾಟದ ಪರಿಣಾಮ ನಿತ್ರಾಣಗೊಂಡು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಯ ಬಳಿಕ ನಿಯಮಾನುಸಾರ ಮೃತದೇಹವನ್ನು ಸುಟ್ಟಿದ್ದಾರೆ. ಘಟನೆಯ ಕುರಿತು ವನ್ಯಜೀವಿ ಇಲಾಖೆ ಹೆಚ್ಚಿನ ತನಿಖೆ ಮುಂದುವರಿಸಿದೆ.
