ಚಾಮರಾಜನಗರ: ಭಾರತ ಸಿಂಧು ರಶ್ಮಿ ಎಂಬ ಮಹಾಕಾವ್ಯವನ್ನು ರಚನೆ ಮಾಡಿ ಕನ್ನಡಕ್ಕೆ ಐದನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾಜ್ಞಾನಿ, ಸಾಹಿತಿ ಕವಿ ಕಾದಂಬರಿಕಾರರು ವಿನಾಯಕ ಕೃಷ್ಣ ಗೋಕಾಕ್ ರವರು. ಸಾಹಿತ್ಯ ರಶ್ಮಿಯಾಗಿ, ಕನ್ನಡಿಗರ ಮನದಲ್ಲಿ ಸದಾ ಕಾಲ ಉಳಿದಿರುವ ಮಹಾಕವಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ ಕೃ ಗೋಕಾಕ್ ರವರ ಜನ್ಮ ದಿನ ಹಾಗೂ ಕೊಡುಗೆಗಳ ಕುರಿತು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನ್ನಡಕ್ಕೆ ಪ್ರಥಮ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಡೆದ ಐತಿಹಾಸಿಕ ಚಳುವಳಿ ಗೋಕಾಕ್ ಚಳುವಳಿ. ಕನ್ನಡ ಕಡ್ಡಾಯ ಶಿಕ್ಷಣವನ್ನು ಮೂರನೇ ತರಗತಿಯಿಂದ 10ನೇ ತರಗತಿಯವರೆಗೆ ನೀಡಬೇಕು ಎಂಬ ಆಲೋಚನೆಯಿಂದ ನೀಡಿದ ಗೋಕಾಕ್ ವರದಿ ಜಾರಿಗೆ ಇಡೀ ಕರ್ನಾಟಕ ಡಾ. ರಾಜಕುಮಾರ್ ನೇತೃತ್ವದಲ್ಲಿ ಕನ್ನಡಿಗರನ್ನು ಒಂದುಗೂಡಿಸುವ ಚಳುವಳಿಯಾಗಿ ಸಾಂಸ್ಕೃತಿಕವಾಗಿ ಭಾವನಾತ್ಮಕವಾಗಿ ಸಾಹಿತ್ಯತ್ಮಕವಾಗಿ ಆಡಳಿತಾತ್ಮಕವಾಗಿ ಒಂದುಗೂಡಿಸಿದ ಮಹಾ ಚಳುವಳಿಯಾಗಿತ್ತು. ಕನ್ನಡಿಗರ ಏಳಿಗೆಗೆ ಸಮಗ್ರವಾದ ವರದಿಯನ್ನು ನೀಡಿದ ಗೋಕಾಕ್ ರವರನ್ನು ಕನ್ನಡಿಗರು ಎಂದೆಂದೂ ಸ್ಮರಿಸುತ್ತಾರೆ. ಭಾರತ ಸಿಂಧು ರಶ್ಮಿ 12 ಖಂಡಗಳ 35 ಸಾವಿರ ಸಾಲುಗಳನ್ನು ಒಳಗೊಂಡಿದೆ. ಭಾರತ ಸಿಂಧು ರಶ್ಮಿ ಮಹಾಕಾವ್ಯವು ಭಾರತದ ಸಮಗ್ರ ಮಾಹಿತಿ ನೀಡುವ ಅಪರೂಪದ ಮಹಾ ಕಾವ್ಯವಾಗಿದೆ. ಕವಿಯಾಗಿ ಕಾದಂಬರಿಕಾರರಾಗಿ, ಪ್ರಾಚಾರ್ಯರಾಗಿ, ಕುಲಪತಿಗಳಾಗಿ, ಸೇವೆ ಸಲ್ಲಿಸಿದ್ದಾರೆ ಮೇರು ವ್ಯಕ್ತಿತ್ವವನ್ನು ಹೊಂದಿದಂತಹ ಗೋಕಾಕ್ ರವರು ಇಂಗ್ಲಿಷ್ ಸ್ನಾತಕೋತರ ಪದವಿಯನ್ನು ಪಡೆದು ಆಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಇವರ ಸಾಹಿತ್ಯ ಪ್ರೀತಿ, ಸಾಹಿತ್ಯ ವಿಮರ್ಶೆ, ಪ್ರವಾಸಿ ಕಥನಗಳು, ಕಾದಂಬರಿಗಳು, ಮಹಾಕಾವ್ಯಗಳು ಜನಪ್ರಿಯ ಕನ್ನಡ ಸಾಹಿತ್ಯದ ಸಾಲಿನಲ್ಲಿ ನಿಲ್ಲುತ್ತದೆ. 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರ ಸಾಹಿತ್ಯದಲ್ಲಿ ಸೃಜನಶೀಲತೆ, ವೈವಿಧ್ಯತೆ, ಸೌಂದರ್ಯ, ಭಾಷಾ ಶೈಲಿ, ಪದ ಸಂಪತ್ತು ಅಪಾರವಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯರವರು ವಿ ಕೃ ಗೋಕಾಕ್ ರವರ ಜೀವನ ಮತ್ತು ಬದುಕಿನ ಪ್ರಾಸ್ತಾವಿಕ ನುಡಿಗಳನ್ನು ನುಡಿದು ಗೋಕಾಕ್ ರಂತಹ ಮೇರು ವ್ಯಕ್ತಿತ್ವವನ್ನು ಹೊಂದಿದ ವ್ಯಕ್ತಿ. ಗೋಕಾಕ್ ಕುರಿತು ಮಾತನಾಡುವುದು ಗೌರವವನ್ನು ತರುತ್ತದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ ಶಿವಲಿಂಗ ಮೂರ್ತಿರವರು ಕನ್ನಡ ಗೀತೆಗಳನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾಪುರುಷೋತ್ತಮ್, ನಿವೃತ್ತ ಶಿಕ್ಷಕಿ ಸರಸ್ವತಿ, ಬಸವರಾಜಪ್ಪ, ಸಚಿನ್, ನಾಗಾರ್ಜುನ್, ಅರುಣ್ ಮುಂತಾದವರು ಇದ್ದರು.
