
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಮಹಾರಾಷ್ಟ್ರದ ಲಾತೂರ್, ಪುಣೆ, ನಾಸಿಕ್ ಮತ್ತು ನಾಂದೇಡ್ ಸೇರಿದಂತೆ ಹಲವು ನಗರಗಳಲ್ಲಿ ಸರಣಿ ದಾಳಿ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿರುವ ನಡುವಲ್ಲೇ, ಇದೇ ಮೊದಲ ಬಾರಿಗೆ ಪೋಷಕರ ವಿರುದ್ಧವೂ ಕಠಿಣ ಕ್ರಮ ಕೈಗೊಂಡಿದೆ. ಪುಣೆಯಲ್ಲಿ ಸಿಬಿಐ ವಶಕ್ಕೆ ಪಡೆದಿರುವ ಡಾ. ಮನೋಜ್ ಶಿರೂರೆ ಅವರು ಲಾತೂರ್ ಮೂಲದ ಪ್ರಸಿದ್ಧ ಮಕ್ಕಳ ತಜ್ಞರಾಗಿದ್ದು, ಓಲ್ಡ್ ಔಸಾ ರಸ್ತೆ ಪ್ರದೇಶದಲ್ಲಿ ಇರುವ ‘ಸಿದ್ಧಿವಿನಾಯಕ ಮಕ್ಕಳ ಆಸ್ಪತ್ರೆ’ ಮೂಲಕ ಸಮಾಜದಲ್ಲಿ ಗೌರವ ಹೊಂದಿದ್ದವರು ಎಂಬುದು ತಿಳಿದುಬಂದಿದೆ. ಪ್ರಕರಣದ ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್ನಿಂದ ಸಿಕ್ಕ ಸುಳಿವಿನ ಆಧಾರದಲ್ಲಿ ಸಿಬಿಐ ಅಧಿಕಾರಿಗಳು ಲಾತೂರ್ನಲ್ಲಿ ಎಂಟು ದಿನಗಳಿಂದ ತನಿಖೆ ನಡೆಸಿ, ಬುಧವಾರ ಸಂಜೆ ಶಿರೂರೆ ಅವರ ಆಸ್ಪತ್ರೆಗೆ ದಾಳಿ ನಡೆಸಿದ್ದು, ನಾಲ್ಕೂವರೆ ಗಂಟೆಗಳ ತೀವ್ರ ವಿಚಾರಣೆಯ ಬಳಿಕ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಆರೋಪದ ಪ್ರಕಾರ, ಡಾ. ಶಿರೂರೆ ಅವರು ತಮ್ಮ ಮಗನಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮ ಸಹಾಯ ಮಾಡಲು ಮೋಟೆಗಾಂವ್ಕರ್ ಜೊತೆ ಕೈಜೋಡಿಸಿ ಪ್ರಶ್ನೆಪತ್ರಿಕೆ ಹಾಗೂ ಸಂಬಂಧಿತ ದಾಖಲೆಗಳನ್ನು ಪಡೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಬಂಧನದ ವೇಳೆ ಅವರ ಮೊಬೈಲ್ ಫೋನ್ ಹಾಗೂ ಆಸ್ಪತ್ರೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಪೇಪರ್ ಪಡೆಯಲು ಎಷ್ಟು ಹಣದ ವ್ಯವಹಾರ ನಡೆದಿದೆ ಹಾಗೂ ಈ ಸಂಪರ್ಕದ ವ್ಯಾಪ್ತಿ ಏನು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಅವರ ಬ್ಯಾಂಕ್ ಖಾತೆಗಳನ್ನೂ ಪರಿಶೀಲಿಸುತ್ತಿದ್ದು, ಈ ಕ್ರಮವು ಹಗರಣದಲ್ಲಿ ಪೋಷಕರ ವಿರುದ್ಧ ನಡೆದ ಮೊದಲ ದೊಡ್ಡ ಕಾರ್ಯಾಚರಣೆ ಎಂದು ಹೇಳಲಾಗಿದೆ.




