
ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವಯೋಮಿತಿ ನಿಯಮದ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, 2025-26ನೇ ಸಾಲಿನಲ್ಲಿ ಈಗಾಗಲೇ LKG ಹಾಗೂ UKG ಪೂರ್ಣಗೊಳಿಸಿರುವ ಸುಮಾರು 5 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯಕ್ಕೆ ಆತಂಕ ಎದುರಾಗಿದೆ. ಶಿಕ್ಷಣ ಇಲಾಖೆಯು ಮಾರ್ಚ್ 28ರಂದು ಹೊರಡಿಸಿದ್ದ ಆದೇಶದಂತೆ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯಸ್ಸು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಅನೇಕ ಮಕ್ಕಳಿಗೆ ಪ್ರವೇಶ ಸಿಗದೇ, ಮತ್ತೊಮ್ಮೆ UKG ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಮಾಸ್ಟರ್ ಕೃಷ್ಣ ಸೇರಿ ಆರು ವಿದ್ಯಾರ್ಥಿಗಳು ಹಾಗೂ ಪೋಷಕರು ಕರ್ನಾಟಕ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅಜಯ್ ಕುಮಾರ್ ಪಾಟೀಲ್, ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿರುವ ಮಕ್ಕಳಿಗೆ 5 ವರ್ಷ 5 ತಿಂಗಳ ವಯಸ್ಸಿದ್ದರೂ 1ನೇ ತರಗತಿಗೆ ಅವಕಾಶ ನೀಡಬೇಕು, ಇಲ್ಲವಾದರೆ ಮಕ್ಕಳ ಅಮೂಲ್ಯ ಒಂದು ವರ್ಷ ವ್ಯರ್ಥವಾಗುವ ಜೊತೆಗೆ ಮಾನಸಿಕ ಬೆಳವಣಿಗೆಯ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ಅಡಿಷನಲ್ ಅಡ್ವೊಕೇಟ್ ಜನರಲ್, ಸಮಸ್ಯೆಯ ಗಂಭೀರತೆಯನ್ನು ಸರ್ಕಾರ ಅರಿತಿದ್ದು, ಪೋಷಕರು ಮತ್ತು ಮಕ್ಕಳ ಹಿತದೃಷ್ಟಿಯಿಂದ ವಯೋಮಿತಿ ನಿಯಮವನ್ನು ಮರುಪರಿಶೀಲಿಸಲು ಸಿದ್ಧವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಮಕ್ಕಳ ಶಿಕ್ಷಣದ ವಿಚಾರದಲ್ಲಿ ವಿಳಂಬ ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ಒಂದು ವಾರದೊಳಗೆ ವಯೋಮಿತಿ ಸಡಿಲಿಕೆ ಕುರಿತು ಸಮಗ್ರ ಮರುಪರಿಶೀಲನೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.



