
ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷ ಮತ್ತು ಸಂಘಟನೆಗಳು ಹೋರಾಟ ನಡೆಸುತ್ತಿದ್ದು, ಕರ್ನಾಟಕದಲ್ಲಿಯೂ ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ನ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ‘ಕೈ’ ನಾಯಕರಿಗೆ 2016ರ ಇತಿಹಾಸವನ್ನು ಜೆಡಿಎಸ್ ಮತ್ತೊಮ್ಮೆ ನೆನಪಿಸಿದೆ. ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ ಎಂದು ಎಕ್ಸ್ ಪೋಸ್ಟ್ ಮೂಖಾಂತರ ವ್ಯಂಗ್ಯವಾಡಿದೆ. ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ, ಎರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರೂ, ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ? ಎಂದು ಜೆಡಿಎಸ್ ಪ್ರಶ್ನಿಸಿದೆ. ಈಗ ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಅಂತಲೂ ವಾಗ್ದಾಳಿ ನಡೆಸಿದೆ.




