
ಕೊಟ್ಟಿಗೆಹಾರ: ಬಣಕಲ್ ಹಿರೇಬೈಲ್ನ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ವಿಷು ಹಬ್ಬದ ಅಂಗವಾಗಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಚಂದ್ರ ಮಾತನಾಡಿ, ರೋಗಿಗಳಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ವಿಷು ಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ ಎಂದು ತಿಳಿಸಿದರು. ವಿಷು ಹಬ್ಬದ ದಿನ ದೇವರ ಕೋಣೆಯಲ್ಲಿ ದೇವರ ವಿಗ್ರಹದ ಮುಂದೆ ಫಲವಸ್ತುಗಳು, ನವಧಾನ್ಯ, ಹೊಸ ಬಟ್ಟೆ, ಧನ, ಕನಕ ಇತ್ಯಾದಿಗಳನ್ನು ಅಣಿಗೊಳಿಸಿ, ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ಗುರುಹಿರಿಯರಿಗೆ ವಂದಿಸಿ ಆಶೀರ್ವಾದ ಪಡೆದು ನಂತರ ‘ಕಣಿ’ ನೋಡುವ ಸಂಪ್ರದಾಯವಿದೆ ಎಂದು ವಿವರಿಸಿದರು. ದೇವರಿಗೆ ಕೊನ್ನಪೂ (ಕಕ್ಕೆ ಹೂ)ವನ್ನು ಕಾಣಿಕೆಯಾಗಿ ಅರ್ಪಿಸಲಾಗುತ್ತದೆ ಎಂದೂ ಹೇಳಿದರು. ಇದೇ ಸಂದರ್ಭದಲ್ಲಿ ಎಂಜಿಎಂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಬಣಕಲ್ ಹಿರೇಬೈಲ್ ಭಾಗದ ಸದಸ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.




