
ಚಿಕ್ಕಮಗಳೂರು: ಕಾಫಿನಾಡಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಸಿನ ಗಾಳಿಯ ಅಬ್ಬರಕ್ಕೆ ಮೂಡಿಗೆರೆ ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ತಾಲೂಕಿನಾದ್ಯಂತ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಮೂಡಿಗೆರೆ ಪಟ್ಟಣವನ್ನು ಹೊರತುಪಡಿಸಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡು ಮಲೆನಾಡು ಕಗ್ಗತ್ತಲಲ್ಲಿ ಮುಳುಗಿದೆ. ಗಾಳಿ-ಮಳೆಯ ತೀವ್ರತೆಗೆ ನೂರಾರು ಮರಗಳು ನೆಲಸಮವಾಗಿ ರಸ್ತೆ ಸಂಚಾರಕ್ಕೂ ಭಾರೀ ಅಡಚಣೆ ಉಂಟಾಗಿದ್ದು, ವಿಶೇಷವಾಗಿ ಬಣಕಲ್-ಮತ್ತಿಕಟ್ಟೆ ಮಾರ್ಗದಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಕಾರಣ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆ ಸಂಪರ್ಕ ಇಲ್ಲದ ಕಾರಣ ಯಂತ್ರೋಪಕರಣಗಳು ತಲುಪದ ಹಿನ್ನೆಲೆಯಲ್ಲಿ ಸ್ಥಳೀಯರು ಸ್ವಯಂಪ್ರೇರಿತವಾಗಿ ಮರ ಮತ್ತು ಕಂಬಗಳನ್ನು ತೆರವುಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಬಿ.ಹೊಸಳ್ಳಿ ಗ್ರಾಮದಲ್ಲಿ ಗಾಳಿ-ಮಳೆ-ಸಿಡಿಲಿನ ಅಬ್ಬರಕ್ಕೆ ಗೌರಮ್ಮ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದರೂ, ಮನೆಯಲ್ಲಿ ಇದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಟ್ಟಾರೆ ಒಂದೇ ರಾತ್ರಿ ಸುರಿದ ಮಳೆಯ ಅಬ್ಬರಕ್ಕೆ ಮೂಡಿಗೆರೆ ತಾಲೂಕು ಅಕ್ಷರಶಃ ಕಂಗಾಲಾಗಿದ್ದು, ಸಾಮಾನ್ಯ ಜೀವನ ಪುನಃ ಸ್ಥಿತಿಗೆ ಬರಲು ಇನ್ನೂ ಕೆಲವು ದಿನಗಳು ಹಿಡಿಯುವ ಸಾಧ್ಯತೆ ಇದೆ.




