
ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಎರಡು ಜಾನುವಾರುಗಳು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಗದ್ದೆಮನೆ ಕಾನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶೈಲಾ ಎಂಬುವವರು ಸಾಕಿದ್ದ ಸುಮಾರು 15 ಸಾವಿರ ರೂಪಾಯಿ ಮೌಲ್ಯದ ಒಂದು ಹೋರಿಕರು ಹಾಗೂ 15 ಸಾವಿರ ರೂಪಾಯಿ ಮೌಲ್ಯದ ಒಂದು ದನ ಮೃತಪಟ್ಟಿವೆ. ಜಾನುವಾರುಗಳು ಶ್ರವಣ್ ಕುಮಾರ್ ಅವರ ಜಮೀನಿನ ಐಬೆಕ್ಸ್ ತಂತಿ ಬೇಲಿಗೆ ಸಿಲುಕಿ ಮೃತಪಟ್ಟಿದ್ದು, ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಾನುವಾರುಗಳು ಜಮೀನಿಗೆ ಬರದಂತೆ ತಡೆಯಲು ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಇದರಿಂದಲೇ ಜಾನುವಾರುಗಳು ಮೃತಪಟ್ಟಿವೆ ಎಂದು ಶೈಲಾ ಆರೋಪಿಸಿದ್ದಾರೆ. ಈ ಸಂಬಂಧ ಶ್ರವಣ್ ಕುಮಾರ್ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




