
ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧಿಸಿ ಮಲೆನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸೆಪ್ಟೆಂಬರ್ 10ರಂದು ಬಾಳೆಹೊನ್ನೂರಿನಲ್ಲಿ ನಡೆಯಲಿರುವ ಹೋರಾಟಕ್ಕೆ ರಂಭಾಪುರಿ ಶ್ರೀಗಳು ಬೆಂಬಲ ಸೂಚಿಸಿದ್ದಾರೆ. ಮಲೆನಾಡು ಉಳಿಸಿ ಹೋರಾಟ ಸಮಿತಿಯು ಬಾಳೆಹೊನ್ನೂರು ಪಟ್ಟಣ ಬಂದ್ಗೆ ಕರೆ ನೀಡಿದ್ದು, ಮಧ್ಯಾಹ್ನ 12 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರು ಹಾಗೂ ಗ್ರಾಮೀಣ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ ಎಂದು ರಂಭಾಪುರಿ ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶಗಳನ್ನು ವರದಿಯ ವ್ಯಾಪ್ತಿಯಿಂದ ಹೊರಗಿಡಬೇಕು ಹಾಗೂ ಕಾಡಿನ ಪ್ರದೇಶವನ್ನು ಮಾತ್ರ ಸಂರಕ್ಷಣಾ ವ್ಯಾಪ್ತಿಗೆ ಸೇರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಮಲೆನಾಡಿನ ಜನರ ಅಸ್ತಿತ್ವಕ್ಕೆ ಧಕ್ಕೆಯಾಗುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳಬಾರದು ಎಂದು ಆಗ್ರಹಿಸಿರುವ ಶ್ರೀಗಳು, ಜಾತಿ, ಮತ, ಪಂಥಗಳ ಭೇದ ಮರೆತು ಎಲ್ಲರೂ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡರ ಮೂಲಕ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದ್ದು, ಅಗತ್ಯವಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ರಂಭಾಪುರಿ ಪೀಠ ಸಜ್ಜಾಗಿದೆ ಎಂದು ತಿಳಿಸಲಾಗಿದೆ.
ವರದಿ: ಸಂತೋಷ್ ಅತ್ತಿಗೆರೆ




