
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ಗೆ ಪಾಕಿಸ್ತಾನ ಪರ ಹಾಡು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು ಹಾಗೂ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಕೆಲವರು ಪಾಕಿಸ್ತಾನ ಪರ ಘೋಷಣೆ ಹಾಗೂ ಹಾಡುಗಳನ್ನು ಬೆಂಬಲಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು. ಪಾಕಿಸ್ತಾನ ಜಿಂದಾಬಾದ್ ಹಾಗೂ ಪಾಕಿಸ್ತಾನ ಪರ ಹಾಡುಗಳು ಕೇವಲ ಪಾಕಿಸ್ತಾನದ ಪರವಾಗಿಯಲ್ಲ, ಅದರ ಹಿಂದೆ ದೇಶವನ್ನು ಇಸ್ಲಾಮೀಕರಣಗೊಳಿಸುವ ಉದ್ದೇಶವಿದೆ ಎಂದು ಆರೋಪಿಸಿದರು. ಇಂದು ಪಾಕಿಸ್ತಾನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಅಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಆದರೂ ಕೆಲವರು ಪಾಕಿಸ್ತಾನದ ಹೆಸರನ್ನು ಬಳಸಿಕೊಂಡು ತಮ್ಮ ಸಿದ್ಧಾಂತವನ್ನು ಮುಂದಿಟ್ಟುಕೊಳ್ಳುತ್ತಿದ್ದಾರೆ ಎಂದು ಮುತಾಲಿಕ್ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರ್ಯಕ್ರಮದಲ್ಲಿ ಮುತಾಲಿಕ್ ಈ ಆಕ್ರೋಶದ ಮಾತುಗಳನ್ನಾಡಿದರು.
ವರದಿ: ಸಂತೋಷ್ ಅತ್ತಿಗೆರೆ




