
ಬೆಂಗಳೂರು: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜಿನ ಮೂವರು ಸಿಬ್ಬಂದಿ ಸುಧಾಕರ್, ಗಿರಿಜಮ್ಮ ಹಾಗೂ ಆರ್. ಸರಿತಾ ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬೆಂಗಳೂರು ನಗರ ಡಿಸಿಗೆ ಪತ್ರ ಬರೆದು, ವಸ್ತ್ರ ಸಂಹಿತೆಯ ಕುರಿತು ಸ್ಪಷ್ಟ ಸೂಚನೆ ನೀಡಿದ್ದರೂ ಜನಿವಾರ ತೆಗೆಸಿರುವುದು ಉದ್ದೇಶಪೂರ್ವಕವೆಂದು ಶಂಕೆ ವ್ಯಕ್ತಪಡಿಸಿದೆ. ಏಪ್ರಿಲ್ 23ರಂದು ನಡೆದ 2026ನೇ ಸಾಲಿನ ಸಿಇಟಿ ಭೌತಶಾಸ್ತ್ರ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಕೆಲ ವಿದ್ಯಾರ್ಥಿಗಳಿಗೆ ಸಿಬ್ಬಂದಿ ಜನಿವಾರ ತೆಗೆಯುವಂತೆ ಸೂಚಿಸಿ ಬಳಿಕ ಪರೀಕ್ಷೆಗೆ ಅವಕಾಶ ನೀಡಿದರೆಂಬ ಮಾಹಿತಿ ಮಾಧ್ಯಮಗಳ ಮೂಲಕ ಹೊರಬಂದಿದ್ದು, ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಹಿರಿಯ ಅಧಿಕಾರಿಗಳಿಂದ ವಿಚಾರಣೆ ನಡೆಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪೂರ್ಣ ವರದಿ ಸಲ್ಲಿಸುವಂತೆ KEA ಆಗ್ರಹಿಸಿದೆ. ಕಳೆದ ವರ್ಷವೂ ಇದೇ ರೀತಿಯ ಘಟನೆಗಳು ನಡೆದ ಹಿನ್ನೆಲೆ ತರಬೇತಿಯಲ್ಲಿ ಜನಿವಾರ, ಲಿಂಗ ಸೇರಿದಂತೆ ಧಾರ್ಮಿಕ ದಿರಿಸುಗಳನ್ನು ತೆಗೆಯಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದ್ದರೂ ಘಟನೆ ಮರುಕಳಿಸಿರುವುದು ಪ್ರಶ್ನೆಗಳನ್ನು ಹುಟ್ಟಿಸಿದೆ. ಈ ನಡುವೆ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಎಕ್ಸ್ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಸರ್ಕಾರದ ಆಡಳಿತದಲ್ಲಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿವೆ” ಎಂದು ಆರೋಪಿಸಿದ್ದಾರೆ.



