
ನವದೆಹಲಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು, ಇಂದಿನಿಂದ ಆನ್ಲೈನ್ ಲಗೇಜ್ ಬುಕಿಂಗ್ ಸೌಲಭ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ರೈಲುಗಳಲ್ಲಿ ನಿಯಮಕ್ಕಿಂತ ಹೆಚ್ಚು ಭಾರವಾದ ಲಗೇಜ್ ಹೊತ್ತು ತರುವುದರಿಂದ ಸಹ-ಪ್ರಯಾಣಿಕರಿಗೆ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಹಾಗೂ ನಿಲ್ದಾಣಗಳ ಪಾರ್ಸೆಲ್ ಕೌಂಟರ್ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಡಿಜಿಟಲ್ ವ್ಯವಸ್ಥೆಯನ್ನು ತರಲಾಗಿದೆ. ಐಆರ್ಸಿಟಿಸಿ ವೆಬ್ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಬುಕ್ ಮಾಡುವಾಗ, ದೃಢೀಕೃತ ಟಿಕೆಟ್ ಹೊಂದಿರುವ ಪ್ರಯಾಣಿಕರು ಮಾತ್ರ ತಮ್ಮ ಹೆಚ್ಚುವರಿ ಲಗೇಜ್ ಅನ್ನು ಮುಂಗಡವಾಗಿ ಆನ್ಲೈನ್ನಲ್ಲಿ ಬುಕ್ ಮಾಡಬಹುದಾಗಿದೆ. ಈ ಹಿಂದೆ ಉಚಿತ ಮಿತಿಗಿಂತ ಹೆಚ್ಚಿನ ಲಗೇಜ್ ಇದ್ದರೆ ನಿಲ್ದಾಣದ ಪಾರ್ಸೆಲ್ ಆಫೀಸ್ಗೆ ಭೇಟಿ ನೀಡಬೇಕಿತ್ತು, ಇನ್ನು ಮುಂದೆ ಈ ಪ್ರಕ್ರಿಯೆಯನ್ನು ಮನೆಯಲ್ಲಿಯೇ ಪೂರ್ಣಗೊಳಿಸಬಹುದ್ದಾಗಿದ್ದು, ರೈಲು ಪ್ರಯಾಣದ ವೇಳೆ ತಪಾಸಣೆ ನಡೆಸುವ ಟಿಟಿಇ ಅಥವಾ ಅಧಿಕಾರಿಗಳಿಂದ ಬೀಳುವ ಭಾರಿ ದಂಡದ ತೊಂದರೆಯಿಂದ ಪ್ರಯಾಣಿಕರು ಪಾರಾಗಬಹುದು. ಎಸಿ 3-ಟೈರ್, 3ಇ ಹಾಗೂ ಎಸಿ ಚೇರ್ ಕಾರ್ ಕೋಚ್ಗಳಲ್ಲಿ ಉಚಿತ ಮಿತಿ ಮತ್ತು ಗರಿಷ್ಠ ಮಿತಿ ಎರಡೂ 40 ಕೆಜಿ ಒಂದೇ ಆಗಿರುವುದರಿಂದ, ಈ ಕೋಚ್ಗಳ ಒಳಗೆ ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋಗಲು ಆನ್ಲೈನ್ ಬುಕಿಂಗ್ ಲಭ್ಯವಿರುವುದಿಲ್ಲ. 40 ಕೆಜಿಗಿಂತ ಹೆಚ್ಚಿದ್ದರೆ ಅದನ್ನು ಲಗೇಜ್ ವ್ಯಾನ್ನಲ್ಲಿ ಪ್ರತ್ಯೇಕವಾಗಿ ಬುಕ್ ಮಾಡಬೇಕಾಗುತ್ತದೆ.



