ಕಾಮನ್ವೆಲ್ತ್ ಗೇಮ್ಸ್ 2026: ಸ್ಕಾಟ್ಲ್ಯಾಂಡ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2026 ರ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಭಾಗವಹಿಸಿದ್ದು, ಜುಲೈ 31ರ ಶುಕ್ರವಾರದ ದಿನ ಭಾರತೀಯ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ದಿನಗಳಲ್ಲಿ ಒಂದಾಗಿದೆ. ಜೂಡೋ ಮತ್ತು ಅಥ್ಲೆಟಿಕ್ಸ್ನಲ್ಲಿ ಕಮಾಲ್ ಮಾಡಿದ ಭಾರತೀಯ ಕ್ರೀಡಾಪಟುಗಳು, ಒಂದೇ ದಿನ 2 ಚಿನ್ನ, 2 ಬೆಳ್ಳಿ ಮತ್ತು 2 ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆಯನ್ನು ಸೃಷ್ಟಿಸಿದ್ದಾರೆ. ಮಹಿಳೆಯರ 48 ಕೆಜಿ ವಿಭಾಗದ ಫೈನಲ್ನಲ್ಲಿ ಕೆನಡಾದ ಹೆಡಿ ಕ್ವಾಚ್ ಅವರನ್ನು ಸೋಲಿಸಿ ಅಸ್ಮಿತಾ ಡೇ ಕಾಮನ್ವೆಲ್ತ್ ಗೇಮ್ಸ್ ಜೂಡೋದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ. ಪುರುಷರ 60 ಕೆಜಿ ವಿಭಾಗದಲ್ಲಿ ಆಸ್ಟ್ರೇಲಿಯಾದ ಜೋಶುವಾ ಕಾಟ್ಜ್ ಅವರನ್ನು ಸೋಲಿಸಿ ಹರ್ಷ್ ಸಿಂಗ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಪುರುಷ ಜೂಡೋ ಆಟಗಾರ ಎನಿಸಿಕೊಂಡಿದ್ದಾರೆ. ಪುರುಷರ ಜಾವೆಲಿನ್ ಫೈನಲ್ನಲ್ಲಿ 85.83 ಮೀಟರ್ ದೂರ ಎಸೆದು ನೀರಜ್ ಚೋಪ್ರಾ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮಹಿಳೆಯರ 57 ಕೆಜಿ ವಿಭಾಗದಲ್ಲಿ ಇಂಗ್ಲೆಂಡ್ನ ಅಸೆಲ್ಯಾ ಟೋಪ್ರಾಕ್ ವಿರುದ್ಧ ಕಠಿಣ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಾಮಿನಿ ಮೌರ್ಯ ಯಶಸ್ವಿಯಾಗಿದ್ದಾರೆ. ಜಾವೆಲಿನ್ ಫೈನಲ್ನಲ್ಲಿ ತಮ್ಮ ವೈಯಕ್ತಿಕ ಅತ್ಯುತ್ತಮ 85.41 ಮೀಟರ್ ಎಸೆದು ಯಶ್ ವೀರ್ ಸಿಂಗ್ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಡೆಕಾಥ್ಲಾನ್ ಸ್ಪರ್ಧೆಯಲ್ಲಿ 7,976 ಅಂಕಗಳನ್ನು ಗಳಿಸಿ ಕಾಮನ್ವೆಲ್ತ್ ಇತಿಹಾಸದಲ್ಲೇ ಭಾರತಕ್ಕೆ ಮೊದಲ ಡೆಕಾಥ್ಲಾನ್ ಪದಕ ತಂದುಕೊಟ್ಟ ಕೀರ್ತಿಯನ್ನು ತೇಜಸ್ವಿನ್ ಶಂಕರ್ ತಮ್ಮದಾಗಿಸಿಕೊಂಡಿದ್ದಾರೆ.
