
ಕಡೂರು: ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಸಕ್ಕರಾಯಪಟ್ಟಣ ಪೊಲೀಸರು ಏಳು ಮಂದಿಯನ್ನು ಬಂಧಿಸಿ, ₹4,300 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸಕ್ಕರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಸಮೀಪದ ಸಾರ್ವಜನಿಕ ಬಂಡಿದಾರಿ ಬಳಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ಪವನ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಸಿದ್ದಾಪುರ ಗ್ರಾಮದ ಬಸ್ ನಿಲ್ದಾಣದ ಬಳಿ ಇಬ್ಬರು ಪಂಚರನ್ನು ಕರೆದುಕೊಂಡು, ಮಾಹಿತಿ ದೊರೆತ ಸ್ಥಳದತ್ತ ತೆರಳಿದ ಪೊಲೀಸರು ಸುಮಾರು 300 ಮೀಟರ್ ದೂರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಟಾರ್ಪಲ್ ಹಾಸಿಕೊಂಡು ಏಳು ಮಂದಿ ಕುಳಿತುಕೊಂಡಿರುವುದನ್ನು ಗಮನಿಸಿದ್ದಾರೆ. ಪರಿಶೀಲಿಸಿದಾಗ ಆರೋಪಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳು ಇಸ್ಪೀಟ್ ಎಲೆಗಳನ್ನು ಎಸೆದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸಿಬ್ಬಂದಿಯ ನೆರವಿನಿಂದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಎಸ್.ಬಿದರೆ ಗೊಲ್ಲರಹಟ್ಟಿ ಹಾಗೂ ಸಿದ್ದಾಪುರ ಗ್ರಾಮದ ನಿವಾಸಿಗಳಾದ ನಿಂಗಪ್ಪ, ಜಗದೀಶ, ಚಂದ್ರಪ್ಪ, ಶಂಕರಪ್ಪ, ಮೂರ್ತಿ, ಮಲ್ಲಿಕಾರ್ಜುನ ಹಾಗೂ ರಮೇಶ್ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲನೆ ನಡೆಸಿದಾಗ 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟಕ್ಕೆ ಪಣವಾಗಿಟ್ಟಿದ್ದ ₹4,300 ನಗದು ಪತ್ತೆಯಾಗಿದೆ. ಜೂಜಾಟ ನಡೆಸಲು ಯಾವುದೇ ಪರವಾನಗಿ ಇಲ್ಲವೆಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಜೂಜಾಟಕ್ಕೆ ಬಳಸಿದ್ದ ಪ್ಲಾಸ್ಟಿಕ್ ಟಾರ್ಪಲ್, 52 ಇಸ್ಪೀಟ್ ಎಲೆಗಳು ಹಾಗೂ ₹4,300 ನಗದನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.




