
ಅತ್ತಿಗೆರೆ: ಅತ್ತಿಗೆರೆ ಗ್ರಾಮದ ಬಸ್ ತಂಗುದಾಣ ಹಾಗೂ ಸಾರ್ವಜನಿಕ ಜಾಗದಲ್ಲಿ ನಿಯಮಬಾಹಿರವಾಗಿ ಅಳವಡಿಸಿರುವ ಖಾಸಗಿ ಸಂಸ್ಥೆಯ ಬೃಹತ್ ಜಾಹೀರಾತು ಬೋರ್ಡ್ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಭಾಗದಲ್ಲಿ ಮಳಿಗೆ ಹೊಂದಿರುವ ಖಾಸಗಿ ಸಂಸ್ಥೆಯೊಂದು ಯಾವುದೇ ಪೂರ್ವಾನುಮತಿ ಪಡೆಯದೆ ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅತ್ತಿಗೆರೆ ಬಸ್ ತಂಗುದಾಣದ ಮುಂಭಾಗದಲ್ಲೇ ಬೃಹತ್ ಬೋರ್ಡ್ಗಳನ್ನು ಅಳವಡಿಸಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು ಹಾಗೂ ವಾಹನ ಸವಾರರಿಗೆ ರಸ್ತೆ ವೀಕ್ಷಣೆಗೆ ಅಡಚಣೆಯಾಗಿದ್ದು, ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳು ತಮ್ಮ ಜಾಹೀರಾತುಗಳನ್ನು ಖಾಸಗಿ ಜಾಗಗಳಲ್ಲಿ ಅನುಮತಿ ಪಡೆದು ಅಳವಡಿಸಿಕೊಳ್ಳಲಿ, ಆದರೆ ಸಾರ್ವಜನಿಕ ಹಾಗೂ ಸರ್ಕಾರಿ ಜಾಗಗಳನ್ನು ಆಕ್ರಮಿಸಿ ಬೋರ್ಡ್ಗಳನ್ನು ಹಾಕಿರುವುದು ಖಂಡನೀಯ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣವೇ ಗಮನಹರಿಸಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು, ಇಲ್ಲವಾದಲ್ಲಿ ಸ್ಥಳೀಯರೇ ಮುತುವರ್ಜಿ ವಹಿಸಿ ಬೋರ್ಡ್ಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಜಯ್ ಕೊಟ್ಟಿಗೆಹಾರ, ಅಭಿಲಾಶ್ ಅತ್ತಿಗೆರೆ, ನಾಗೇಶ್ ಗೌಡ, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸಂತೋಷ್ ಅತ್ತಿಗೆರೆ




