
ಚಿಕ್ಕಮಗಳೂರು: ಸಹಕಾರ ಸಂಘದ ವಾರ್ಷಿಕ ಸಭೆಯಲ್ಲೇ ಅಧ್ಯಕ್ಷರು ಹಾಗೂ ನಿರ್ದೇಶಕರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ನೂಕಾಟ–ತಳ್ಳಾಟ ಹಾಗೂ ಹೊಡೆದಾಟ ನಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಂಗರವಳ್ಳಿ ಗ್ರಾಮದ ಹಂಗರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ. ಕಣತಿ ಸಮೀಪದ ಸರ್ಕಾರಿ ಜಾಗದ ವಿಚಾರವಾಗಿ ಸಭೆಯಲ್ಲಿ ಗಲಾಟೆ ಆರಂಭವಾಗಿದ್ದು, ಸಂಘದ ಹೆಸರಿಗೆ ಜಾಗ ಮಾಡಿಸಿಕೊಂಡು ಅಂಗಡಿ ಹಾಗೂ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಪ್ರಸ್ತಾವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಧ್ಯಕ್ಷ ಅರುಣ್ ಹಾಗೂ ನಿರ್ದೇಶಕ ದಿಲೀಪ್ ಅವರ ಪ್ರಸ್ತಾವನೆಗೆ ನಿರ್ದೇಶಕ ಬೈಗೂರು ನಾಗೇಶ್ ವಿರೋಧ ವ್ಯಕ್ತಪಡಿಸಿದ್ದು, ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ಸೈಟ್ ನೀಡುವಂತೆ ನಾಗೇಶ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಜಾಗದ ವಿಚಾರ ಸಭೆಯಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಎರಡೂ ಬಣಗಳ ನಡುವೆ ಜೋರು ಮಾತಿನ ಚಕಮಕಿ ನಡೆದಿದ್ದು, ಮಾತಿಗೆ ಮಾತು ಬೆಳೆದು ನೂಕಾಟ–ತಳ್ಳಾಟವಾಗಿ ಬಳಿಕ ಪರಸ್ಪರ ಕೈ-ಕೈ ಮಿಲಾಯಿಸಿ ಹೊಡೆದಾಟ ನಡೆದಿದೆ. ಸಭಾಂಗಣದಲ್ಲೇ ಮುಖಂಡರ ನಡುವೆ ಹೊಡೆದಾಟ ನಡೆದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವರದಿ: ಸಂತೋಷ್ ಅತ್ತಿಗೆರೆ




