
ಚಿಕ್ಕಮಗಳೂರು: ಹಬ್ಬ-ಹರಿದಿನಗಳಲ್ಲೂ ಹಬ್ಬದ ಸಂಭ್ರಮವನ್ನು ಬದಿಗೊತ್ತಿ ವಿಶ್ರಾಂತಿಯಿಲ್ಲದೆ ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗೌರಿ-ಗಣೇಶ ಹಬ್ಬದ ಹಿನ್ನೆಲೆ ಸಾಂಪ್ರದಾಯಿಕ ಬಾಗಿಣ ನೀಡಿ ಗೌರವಿಸಿರುವ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ. ಜಯಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪಿಎಸ್ಐ ರವೀಶ್ ಅವರು ತಮ್ಮ ಠಾಣೆಯ ಮಹಿಳಾ ಸಿಬ್ಬಂದಿಗೆ ಗೌರವಪೂರ್ವಕವಾಗಿ ಬಾಗಿಣ ಅರ್ಪಿಸಿ, ಹಬ್ಬದ ಸಿಹಿ ನೀಡಿ ಶುಭಾಶಯ ಕೋರಿದ್ದಾರೆ. ಕುಟುಂಬದಿಂದ ದೂರವಿದ್ದು ಸಾರ್ವಜನಿಕರ ರಕ್ಷಣೆಗಾಗಿ ಸದಾ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಠಾಣೆಯಲ್ಲೇ ಹಬ್ಬದ ವಾತಾವರಣ ನಿರ್ಮಿಸಿಕೊಡುವ ಉದ್ದೇಶದಿಂದ ಪಿಎಸ್ಐ ರವೀಶ್ ಅವರು ಪ್ರತಿ ವರ್ಷವೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಸಹೋದ್ಯೋಗಿಗಳಲ್ಲಿ ಕುಟುಂಬದ ಭಾವನೆ ಹಾಗೂ ಸೌಹಾರ್ದತೆ ಮೂಡಿಸುವ ಜೊತೆಗೆ ಕರ್ತವ್ಯದ ಒತ್ತಡದ ನಡುವೆಯೂ ಠಾಣೆಯಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣರಾಗಿದ್ದಾರೆ. ಪಿಎಸ್ಐ ರವೀಶ್ ಅವರು ಈ ಹಿಂದೆ ಮಲ್ಲಂದೂರು ಹಾಗೂ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೂ ಮಹಿಳಾ ಸಿಬ್ಬಂದಿಗೆ ಬಾಗಿಣ ನೀಡಿ ಗೌರವಿಸುತ್ತಿದ್ದರು.
ವರದಿ: ಸಂತೋಷ್ ಅತ್ತಿಗೆರೆ




