
ಚಾಮರಾಜನಗರ: ಬಾಲ ಗಂಗಾಧರ ತಿಲಕ್ ಅವರು ಗಣೇಶ ಉತ್ಸವದ ಮೂಲಕ ದೇಶದ ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಿ, ಭಾರತೀಯತೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಬೆಳೆಸಿದ ಮಹಾನ್ ಪರಂಪರೆಯನ್ನು ಸೃಷ್ಟಿಸಿದ್ದಾರೆ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ತಿಳಿಸಿದರು. ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಆಯೋಜಿಸಿದ್ದ ಗಣೇಶ ಉತ್ಸವ ಹಾಗೂ ತಿಲಕ್ ಅವರ ಚಿಂತನೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಮನೆಮನೆಯಲ್ಲೂ ಗಣೇಶ ಉತ್ಸವ ಆಚರಿಸಲಾಗುತ್ತಿದ್ದು, ಗಣೇಶ ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾನೆ ಎಂದರು. ಗಣೇಶ ಉತ್ಸವದ ಮೂಲಕ ಸಾಮಾಜಿಕ ಏಕತೆ, ಭಾವೈಕ್ಯತೆ, ಧಾರ್ಮಿಕ ಚಿಂತನೆ, ಕಲೆ, ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಜನಪದ ಕಲೆಗಳಿಗೆ ಹೊಸ ಶಕ್ತಿ ದೊರೆಯುತ್ತಿದೆ ಎಂದು ಹೇಳಿದರು. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜನರನ್ನು ಸಂಘಟಿಸಿ ಒಗ್ಗೂಡಿಸುವ ಉದ್ದೇಶದಿಂದ ತಿಲಕ್ ಅವರು ಆರಂಭಿಸಿದ ಸಾರ್ವಜನಿಕ ಗಣೇಶ ಉತ್ಸವ ಇಂದು ಗಲ್ಲಿ ಗಲ್ಲಿಗಳಲ್ಲೂ ಯುವಶಕ್ತಿಯನ್ನು ಒಗ್ಗೂಡಿಸುವ ಮೂಲಕ ಪರಸ್ಪರ ಪ್ರೀತಿ, ಸಹಕಾರ ಹಾಗೂ ಸಾಮಾಜಿಕ ಏಕತೆಗೆ ಕಾರಣವಾಗಿದೆ ಎಂದರು. ಗಣೇಶ ಉತ್ಸವ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದ ವಿವಿಧ ದೇಶಗಳಲ್ಲೂ ಆಚರಿಸಲಾಗುತ್ತಿರುವುದು ತಿಲಕ್ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯರಾದ ಸರೋಜಮ್ಮ ಮಾತನಾಡಿ, ಗಣೇಶ ಉತ್ಸವ ಮನೆಮನೆಗಳಲ್ಲಿ ಸಂಭ್ರಮ ಮೂಡಿಸುವುದರ ಜೊತೆಗೆ ಹಿರಿಯರು ಹಾಗೂ ಕಿರಿಯರು ಒಟ್ಟಾಗಿ ಕಲೆ, ಸಾಹಿತ್ಯ ಮತ್ತು ಸಂಗೀತದ ಮೂಲಕ ಸಂಭ್ರಮಿಸಲು ಅವಕಾಶ ಕಲ್ಪಿಸುತ್ತದೆ ಎಂದರು. ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್. ಋಗ್ವೇದಿ ಮಾತನಾಡಿ, ಗಣೇಶ ಉತ್ಸವಗಳು ಪ್ರತಿಯೊಬ್ಬರಲ್ಲೂ ಸಂತೋಷ ಮೂಡಿಸುವುದರ ಜೊತೆಗೆ ಸಮಾಜವನ್ನು ಅರಿಯಲು ಹಾಗೂ ಭಾರತೀಯ ಸಂಸ್ಕೃತಿ, ಸ್ವರಾಜ್ಯ ಪರಿಕಲ್ಪನೆ ಮತ್ತು ಸ್ವದೇಶಿ ಚಿಂತನೆಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಶ್ರಾವ್ಯ, ಸುಹಾಸ್, ರವಿ, ಸುಂದರ್, ಸಾನಿಕ, ಮಾಲಾ, ಮುರುಗೇಶ್, ವಾಣಿಶ್ರೀ ಹಾಗೂ ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




