
ಮೂಡಿಗೆರೆ: ಶಾಲೆ ಹಾಗೂ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವ ಮತ್ತು ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಮತ್ತು ಗೋಮಾಂಸ ಮಾರಾಟಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆ ಮುಖಂಡರು ಸೋಮವಾರ ತಹಸೀಲ್ದಾರ್ ಎಸ್. ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ಈ ನಿರ್ಧಾರವು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 2022ರಲ್ಲಿ ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ರಾಜ್ಯದಾದ್ಯಂತ ಉದ್ವಿಗ್ನ ವಾತಾವರಣ ಸೃಷ್ಟಿಸಿತ್ತು ಹಾಗೂ ಈ ಸಂಬಂಧ ನ್ಯಾಯಾಲಯ ಶಾಲೆ-ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರ ಪಾಲನೆಗೆ ಸೂಚನೆ ನೀಡಿತ್ತು. ಹಿಜಾಬ್ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿಯಿರುವ ಸಂದರ್ಭದಲ್ಲಿ ಸರ್ಕಾರ ಹಿಜಾಬ್ಗೆ ಅವಕಾಶ ನೀಡಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು. ಹಿಜಾಬ್ಗೆ ಅವಕಾಶ ನೀಡಿದರೆ ಇತರೆ ಸಮುದಾಯಗಳ ವಿದ್ಯಾರ್ಥಿಗಳು ಸಹ ತಮ್ಮ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವ ಸಾಧ್ಯತೆ ಇದ್ದು, ಇದರಿಂದ ಶಿಕ್ಷಣದ ಮೂಲ ಉದ್ದೇಶಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟ ಅವರು, ಶಾಲೆಗಳಲ್ಲಿ ಏಕರೂಪದ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಹಾಗೂ ಗೋಮಾಂಸ ಮಾರಾಟದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಂಡು ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ವೇದಿಕೆಯ ಮುಖಂಡರಾದ ಸಂಜಯ್ ಕೊಟ್ಟಿಗೆಹಾರ, ಬಸವರಾಜ್, ರಘು ಮೂಡಿಗೆರೆ, ಶರತ್ ಮಾಕೋನಹಳ್ಳಿ, ಧರ್ಮರಾಜ್ ಬಿನ್ನಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




