
ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಮಾಣಿಕ್ಯಾಧಾರ–ಸೀತಾಳಯ್ಯನಗಿರಿ ಮಾರ್ಗದಲ್ಲಿ ನಡೆದ ಅಪಘಾತದಲ್ಲಿ ಟೆಂಪೋದಲ್ಲಿದ್ದ 13 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಪ್ರವಾಸಕ್ಕಾಗಿ ಟೆಂಪೋದಲ್ಲಿ ಬಂದಿದ್ದ 13 ಮಂದಿ ಪ್ರಯಾಣಿಕರು ಮುಳ್ಳಯ್ಯನಗಿರಿ ಪ್ರವಾಸ ಮುಗಿಸಿ ಇಳಿಜಾರಿನ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪ್ರಯಾಣಿಕರೊಬ್ಬರ ಪಾದರಕ್ಷೆ ಚಾಲಕನ ಬಳಿಗೆ ಬಂದು ಬ್ರೇಕ್ ಹಾಗೂ ಎಕ್ಸಲೇಟರ್ ಮಧ್ಯೆ ಸಿಲುಕುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ತೆಗೆಯಲು ಚಾಲಕ ಮುಂದಾಗಿದ್ದಾನೆ. ಈ ವೇಳೆ ವಾಹನ ನ್ಯೂಟ್ರಲ್ ಗೇರ್ಗೆ ಬಿದ್ದ ಪರಿಣಾಮ ನಿಯಂತ್ರಣ ತಪ್ಪಿ ಸೀತಾಳಯ್ಯನಗಿರಿ ಸಮೀಪದ ಕಂದಕಕ್ಕೆ ಇಳಿದಿದೆ. ಅಪಘಾತದಿಂದ ವಾಹನಕ್ಕೆ ಹಾನಿಯಾಗಿದ್ದರೂ ಟೆಂಪೋದಲ್ಲಿದ್ದ ಎಲ್ಲಾ 13 ಮಂದಿ ಪ್ರಯಾಣಿಕರು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




