
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ ಸೇರಿದಂತೆ ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕೆಲವೆಡೆ ಸುಮಾರು ಮೂರು ಅಡಿ ಎತ್ತರದವರೆಗೆ ನೀರು ಹರಿದಿರುವ ದೃಶ್ಯಗಳು ಕಂಡುಬಂದಿವೆ. ನಗರದ ಎಐಟಿ ಕಾಲೇಜು ರಸ್ತೆ ಸಮೀಪ ಭಾರೀ ಪ್ರಮಾಣದ ಮಳೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ನೀರಿನ ಮಧ್ಯೆ ಸಂಚರಿಸುತ್ತಿದ್ದ ಆಟೋ ರಿಕ್ಷಾದ ಸೈಲೆನ್ಸರ್ ಒಳಗೆ ನೀರು ನುಗ್ಗಿದ ಪರಿಣಾಮ ಆಟೋ ಕೆಟ್ಟು ರಸ್ತೆಯಲ್ಲೇ ನಿಂತ ಘಟನೆ ಸಂಭವಿಸಿದೆ. ಇದೇ ವೇಳೆ ಆಲ್ಟೋ ಕಾರೊಂದು ಮಳೆ ನೀರಿನಲ್ಲಿ ಸಿಲುಕಿದ್ದು, ಕಾರಿನ ಚಕ್ರಗಳು ಸಂಪೂರ್ಣ ಮುಳುಗಿದರೆ, ನೀರಿನ ಮಟ್ಟವು ಕಾರಿನ ಕಿಟಕಿಯ ಮಟ್ಟದವರೆಗೆ ಏರಿಕೆಯಾಗಿತ್ತು. ಕೆಲ ಹೊತ್ತು ಕಾರಿನ ಬಾನೆಟ್ ಮೇಲೆಯೇ ನೀರು ಹರಿದ ದೃಶ್ಯ ಆತಂಕ ಮೂಡಿಸಿತು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯ ಜೊತೆಗೆ ಭಾರೀ ಗಾಳಿ, ಗುಡುಗು ಮತ್ತು ಸಿಡಿಲಿನ ಆರ್ಭಟದಿಂದ ಸಾರ್ವಜನಿಕರು ಹೈರಾಣಾಗಿದ್ದು, ಮಲೆನಾಡು ಭಾಗದ ಜನರು ಮಳೆ ಪರಿಸ್ಥಿತಿಯಿಂದ ಕಂಗಾಲಾಗಿದ್ದಾರೆ. ಹವಾಮಾನ ವೈಪರೀತ್ಯದಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಂಚಾರ ಮತ್ತು ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ನಿರಂತರ ಮಳೆಯಿಂದ ಜನರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.




