
ದೆಹಲಿ: ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಬಹುದೆಂಬ ಚರ್ಚೆಗಳು ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಕೇಳಿಬಂದಿದೆ. ರಾಹುಲ್ ಗಾಂಧಿ ಸೂಚನೆ ನೀಡಿದ ತಕ್ಷಣವೇ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬಹುದು ಎನ್ನಲಾಗಿದ್ದು, ಈ ಕುರಿತು ಚರ್ಚಿಸಲು ಅವರು ಕಾಲಾವಕಾಶ ಕೇಳಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿವೆ. ಇದೇ ವೇಳೆ ಬಹುಕಾಲದಿಂದ ಮುಖ್ಯಮಂತ್ರಿ ಹುದ್ದೆಯ ಕನಸು ಕಂಡಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸಿಎಂ ಸ್ಥಾನಕ್ಕೇರಿಸುವ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿ ಬೆಂಬಲ ನೀಡಿದ್ದಾರೆ ಹಾಗೂ ರಾಹುಲ್ ಗಾಂಧಿಯವರನ್ನು ಮನವೊಲಿಸಿದ್ದಾರೆ ಎಂಬ ಮಾಹಿತಿಯೂ ಮೂಲಗಳಿಂದ ತಿಳಿದುಬಂದಿದೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ ಅವರೊಂದಿಗೆ ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಒಬಿಸಿ ಸಮುದಾಯದ ನಾಯಕರಿಗೆ ಡಿಸಿಎಂ ಹುದ್ದೆ ನೀಡುವ ಮೂಲಕ ನಾಲ್ವರು ಉಪಮುಖ್ಯಮಂತ್ರಿಗಳ ವ್ಯವಸ್ಥೆ ಜಾರಿಯಾಗಬಹುದು ಎನ್ನಲಾಗಿದ್ದು, ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಇದೇ ವೇಳೆ ನಡೆದ ಹೈವೋಲ್ಟೇಜ್ ಸಭೆಯಲ್ಲಿ ಕೆಲವು ಹಿರಿಯ ಸಚಿವರ ಕಾರ್ಯವೈಖರಿಯ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಹಲವು ಹಿರಿಯ ನಾಯಕರಿಗೆ ಅವಕಾಶ ಕಡಿಮೆಯಾಗುವ ಹಾಗೂ ಯುವಕರು ಮತ್ತು ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಸಭೆಯಲ್ಲಿ ರಾಹುಲ್ ಗಾಂಧಿ ನೀಡಿದ್ದ ರಾಜ್ಯಸಭಾ ಸ್ಥಾನ ಆಫರ್ ಅನ್ನು ಸಿದ್ದರಾಮಯ್ಯ ಅವರು ನಯವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಹುದ್ದೆ ಅಥವಾ ಪ್ರಮುಖ ಖಾತೆ ನೀಡುವ ಸಾಧ್ಯತೆ ಇದೆ ಎಂಬ ಚರ್ಚೆಗಳೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.




